February 3, 2026

ಕೇರಳ ಆರ್‌ಎಸ್‌ಎಸ್ ಕಾರ್ಯಕರ್ತನ ಹತ್ಯೆ:
ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

0
kerala-BJP-1200.jpg

ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಅಪರಿಚಿತ ದುಷ್ಕರ್ಮಿಗಳ ದಾಳಿಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ಎಸ್ ಸಂಜಿತ್ ಸಾವನ್ನಪ್ಪಿದ ಆರು ದಿನಗಳ ನಂತರ, ಬಿಜೆಪಿಯ ರಾಜ್ಯ ಘಟಕವು ಶನಿವಾರ ಈ ಬಗ್ಗೆ ಎನ್‌ಐಎ ತನಿಖೆಯನ್ನು ಕೋರುವುದಾಗಿ ಹೇಳಿದೆ.

ಸಂಜಿತ್ (27) ಎಂಬಾತನ ಮೇಲೆ ಸೋಮವಾರ ಬೆಳಗ್ಗೆ ಎಲಪ್ಪುಳ್ಳಿ ಗ್ರಾಮದಲ್ಲಿ ಆತನ ಪತ್ನಿ ಅರ್ಷಿಕಾ ಸಮ್ಮುಖದಲ್ಲಿ ಜನರ ಗುಂಪೊಂದು ಹಲ್ಲೆ ನಡೆಸಿತ್ತು. ಈ ಪ್ರಕರಣದಲ್ಲಿ ಸ್ಥಳೀಯ ಪೊಲೀಸರು ಇನ್ನೂ ಯಾರನ್ನೂ ಬಂಧಿಸಿಲ್ಲ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ರಾಜಕೀಯ ಅಂಗವಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಹತ್ಯೆಯ ಹಿಂದೆ ಇದೆ ಎಂದು ಕೇರಳ ಬಿಜೆಪಿ ಆರೋಪಿಸಿದೆ ಆದರೆ ಎಸ್‌ಡಿಪಿಐ ಆರೋಪವನ್ನು ನಿರಾಕರಿಸಿದೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಮುಖ್ಯಸ್ಥ ಕೆ ಸುರೇಂದ್ರನ್, ಹತ್ಯೆಯ ಕುರಿತು ಎನ್‌ಐಎ ತನಿಖೆಗೆ ಒತ್ತಾಯಿಸಲು ಸೋಮವಾರ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುವುದಾಗಿ ಹೇಳಿದರು. “ಕೇರಳದಲ್ಲಿ ಸಿಪಿಐ(ಎಂ)-ಎಸ್‌ಡಿಪಿಐ ನಂಟು ವಿರುದ್ಧ ಬಿಜೆಪಿ ಸಾಮೂಹಿಕ ಆಂದೋಲನ ನಡೆಸಲಿದೆ. ಕಳೆದ ಐದು ವರ್ಷಗಳಲ್ಲಿ 10 ಆರೆಸ್ಸೆಸ್-ಬಿಜೆಪಿ ಕಾರ್ಯಕರ್ತರನ್ನು ಈ ಗುಂಪು ಹತ್ಯೆ ಮಾಡಿದೆ. ಈ ಹತ್ಯೆಗಳ ಹಿಂದಿನ ಪಿತೂರಿಯನ್ನು ಪೊಲೀಸರು ಇನ್ನೂ ಬಿಚ್ಚಿಟ್ಟಿಲ್ಲ. ಸಂಜಿತ್ ಹತ್ಯೆಯಲ್ಲಿ ಪಿಎಫ್‌ಐ ಮತ್ತು ಎಸ್‌ಡಿಪಿಐ ಪಾತ್ರವನ್ನು ಬಹಿರಂಗಪಡಿಸಲು ಪೊಲೀಸರು ಹೆದರುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಆಡಳಿತಾರೂಢ ಸಿಪಿಐ(ಎಂ) ಮತ್ತು ಎಸ್‌ಪಿಡಿಐ ನಡುವಿನ ಸಂಬಂಧದಿಂದಾಗಿ ಪೊಲೀಸರು ಆರೋಪಿಗಳನ್ನು ಬಂಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸುರೇಂದ್ರನ್ ಹೇಳಿದ್ದಾರೆ. “ಸಿಪಿಐ(ಎಂ) ರಾಜಕೀಯ ಪ್ರತಿಸ್ಪರ್ಧಿಗಳನ್ನು ಕೊಲ್ಲುವ ತನ್ನ ಬರ್ಬರ ನೀತಿಯನ್ನು ಕಾರ್ಯಗತಗೊಳಿಸಲು ಎಸ್‌ಡಿಪಿಐ ಅನ್ನು ಬಳಸುತ್ತಿದೆ. ಸಂಜಿತ್ ಅವರು ಈ ಹಿಂದೆ ಬೆದರಿಕೆಗಳನ್ನು ಎದುರಿಸಿದ್ದರು, ಆದರೆ ಪೊಲೀಸರು ಅವರ ಜೀವ ರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ,” ಎಂದು ಸುರೇಂದ್ರನ್ ಹೇಳಿದರು. ಸಂಜಿತ್ ಹತ್ಯೆಯ ಕುರಿತು ಸ್ಥಳೀಯ ನ್ಯಾಯಾಲಯದಲ್ಲಿ ಸಲ್ಲಿಸಲಾದ ಎಫ್‌ಐಆರ್‌ನಲ್ಲಿ ಕೊಲೆ ರಾಜಕೀಯ ಸ್ವರೂಪದ್ದಾಗಿದೆ ಎಂದು ಹೇಳಿತ್ತು, ಆದರೆ ಯಾವುದೇ ಪಕ್ಷದ ಹೆಸರನ್ನು ಉಲ್ಲೇಖಿಸಿಲ್ಲ.

Leave a Reply

Your email address will not be published. Required fields are marked *

error: Content is protected !!