ಆಕಸ್ಮಿಕ ಬೆಂಕಿ ತಗಲಿ ಗುಜರಿ ಗೋದಾಮು ಭಸ್ಮ
ಬೆಂಗಳೂರು: ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯ ಪ್ರಮೋದ್ ಬಡಾವಣೆಯಲ್ಲಿರುವ ಗುಜರಿ ಗೋದಾಮಿನಲ್ಲಿ ಗುರುವಾರ ರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ಅಗ್ನಿಶಾಮಕ ದಳದ 8 ವಾಹನಗಳ ಮೂಲಕ ಕಾರ್ಯಾಚರಣೆ ನಡೆಸಿ ಬೆಂಕಿ
ನಂದಿಸಲಾಗಿದೆ.
‘ನಾಯಂಡನಹಳ್ಳಿ ಬಳಿಯ ಗೋದಾಮಿನಲ್ಲಿ ಪ್ಲಾಸ್ಟಿಕ್ ಬಾಟಲಿಗಳು ಹಾಗೂ ಇತರೆ ಗುಜರಿ ವಸ್ತುಗಳನ್ನು ಸಂಗ್ರಹಿಸಲಾಗಿತ್ತು.
ರಾತ್ರಿ 12 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡು, ಇಡೀ ಗೋದಾಮು ಆವರಿಸಿತ್ತು. ನಗರದ ವಿವಿಧೆಡೆಯ ಅಗ್ನಿಶಾಮಕ ದಳದ 8 ವಾಹನಗಳಲ್ಲಿ ಸ್ಥಳಕ್ಕೆ ಬಂದ ಸಿಬ್ಬಂದಿ, ಬೆಂಕಿ ನಂದಿಸಿದ್ದಾರೆ.
ಬೆಂಕಿ ಹೊತ್ತಿಕೊಳ್ಳಲು ಕಾರಣ ಗೊತ್ತಾಗಿಲ್ಲ. ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.




