July 14, 2026

ಕಲ್ಲಡ್ಕ: ಅನುಗ್ರಹ ಮಹಿಳಾ ಪಿಯು ಕಾಲೇಜು, ಕಲ್ಲಡ್ಕದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ

0
IMG-20260714-WA0184

ಅನುಗ್ರಹ ಮಹಿಳಾ ಪಿಯು ಕಾಲೇಜು, ಕಲ್ಲಡ್ಕದಲ್ಲಿ 2026–27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವು  ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ಸಂಘದ ಸದಸ್ಯರಿಗೆ ಕಾಲೇಜಿನ ಆಡಳಿತ ಮಂಡಳಿಯ ಜೊತೆ ಕಾರ್ಯದರ್ಶಿಯಾದ ಶ್ರೀ ಎನ್. ಕೆ. ಇದ್ದಿನಬ್ಬ ಅವರು ಬ್ಯಾಡ್ಜ್‌ಗಳನ್ನು ವಿತರಿಸಿದರು. ಬಳಿಕ ಪ್ರಾಂಶುಪಾಲರಾದ ಡಾ. ಹೇಮಲತಾ ಬಿ.ಡಿ. ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ  ಶ್ರೀ ಎನ್. ಕೆ. ಇದ್ದಿನಬ್ಬ ಅವರು ತಮ್ಮ ಜೀವನದಲ್ಲಿ ವಿವಿಧ ನಾಯಕತ್ವದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವಗಳನ್ನು ಹಂಚಿಕೊಂಡು, ವಿದ್ಯಾರ್ಥಿ ಸಂಘದ ಸದಸ್ಯರು ಜವಾಬ್ದಾರಿಯಿಂದ ನಾಯಕತ್ವ, ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು. ನಾಯಕತ್ವವು ಅಧಿಕಾರದ ಸಂಕೇತವಲ್ಲ; ಬದಲಾಗಿ ಇತರರಿಗೆ ಮಾರ್ಗದರ್ಶನ ನೀಡಿ ಪ್ರೇರೇಪಿಸುವ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಹೇಮಲತಾ ಬಿ.ಡಿ. ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿ ಸಂಘದ ಸದಸ್ಯರು ತಮ್ಮ ಹುದ್ದೆಯ ಜವಾಬ್ದಾರಿಯನ್ನು ಅರಿತು ಕರ್ತವ್ಯ ನಿರ್ವಹಿಸಬೇಕು ಮತ್ತು ಪ್ರತಿಯೊಬ್ಬ ನಾಯಕನಲ್ಲೂ ತಾಳ್ಮೆ, ಶಿಸ್ತು ಹಾಗೂ ಸೇವಾ ಮನೋಭಾವ ಅತ್ಯಗತ್ಯ ‌ಎಂದು ವಿದ್ಯಾರ್ಥಿ ನಾಯಕಿಯರಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮವು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಮುನಾ ಫಾತಿಮಾ ರವರ ಕಿರಾಅತ್‌ನೊಂದಿಗೆ ಆರಂಭಗೊಂಡಿತು. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಮೆಹ್ರಿಶ್ ಅವರು ಸ್ವಾಗತ ಭಾಷಣ ಮಾಡಿದರು. ದ್ವಿತೀಯ ವಾಣಿಜ್ಯ ವಿಭಾಗದ ರಿಝಾ ಫಾತಿಮಾ ಅವರು ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮವನ್ನು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಮೈಮೂನಾ ತಸ್ಮಿಯಾ  ನಿರೂಪಿಸಿದರು.

ವೇದಿಕೆಯಲ್ಲಿ ಅನುಗ್ರಹ ಸಲಹಾ ಸಮಿತಿಯ ಕಾರ್ಯದರ್ಶಿ ಶ್ರೀಮತಿ ತಾರಾಕ್ಷಿ, ಪದವಿ ಪೂರ್ವ ವಿಭಾಗದ ಸಂಯೋಜಕಿ ಶ್ರೀಮತಿ ಮಮಿತಾ ಎಸ್. ರೈ ಹಾಗೂ ಮೌಲ್ಯ ಶಿಕ್ಷಣ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸಲೀಮಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!