ಹಣೆಗೆ ಕುಂಕುಮ ಇಟ್ಟುಕೊಂಡಿಲ್ಲ ಎಂದು ಮಹಿಳೆಯನ್ನು ನಿಂದಿಸಿದ ಬಿಜೆಪಿ ಸಂಸದ
ಕೋಲಾರ: ಮಹಿಳೆಯೊಬ್ಬರು ಹಣೆಗೆ ಕುಂಕುಮ ಇಟ್ಟುಕೊಂಡಿಲ್ಲವೆಂದು ಅವರನ್ನು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ದಿನವಾದ ಬುಧವಾರ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ “ಹಣೆಗೆ ಕುಂಕುಮ ಯಾಕಿಟ್ಟಿಲ್ಲ, ಗಂಡ ಬದುಕಿದ್ದಾನೆ ತಾನೇ” ಎಂದು ಮಹಿಳೆಗೆ ಅವಮಾನ ಮಾಡಿರುವ ಆಘಾತಕಾರಿ ಘಟನೆ ಕೋಲಾರದಲ್ಲಿ ನಡೆದಿದೆ.
ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ವೇಳೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿದಾಡುತ್ತಿದೆ. ಇದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಕಾರ್ಯಕ್ರಮದ ಪ್ರಯುಕ್ತ ಮಹಿಳೆಯರು ತಾವೇ ತಯಾರಿಸಿದ ಕೆಲ ಉತ್ಪನ್ನಗಳ ಮಾರಾಟ ಮಳಿಗೆಗಳನ್ನು ರಂಗಮಂದಿರ ಆವರಣದಲ್ಲಿ ತೆರೆದಿದ್ದರು.
ಸುಜಾತಾ ಎಂಬ ಮಹಿಳೆಯ ಮಳಿಗೆ ವೀಕ್ಷಣೆ ವೇಳೆ ಮುನಿಸ್ವಾಮಿ, ‘ಏನಮ್ಮ ನಿನ್ನ ಹೆಸರು, ಹಣೆಗೆ ಏಕೆ ಬೊಟ್ಟು ಇಟ್ಟುಕೊಂಡಿಲ್ಲ? ವೈಷ್ಣವಿ ಎಂಬುದಾಗಿ ಅಂಗಡಿ ಹೆಸರನ್ನು ಏಕೆ ಇಟ್ಟುಕೊಂಡಿದ್ದೀಯಾ? ಮೊದಲು ಬೊಟ್ಟು ಇಟ್ಟುಕೋ’ ಎಂದು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡರು.’ಸುಜಾತಾ ಎಂಬ ಹೆಸರು ಇಟ್ಟುಕೊಂಡಿದ್ದೀಯಾ? ನಿನ್ನ ಗಂಡ ಬದುಕಿದ್ದಾನೆ ತಾನೇ? ಕಾಮನ್‌ಸೆನ್ಸ್ ಇಲ್ಲ. ಯಾರೋ ಕಾಸು ಕೊಡುತ್ತಾರೆಂದು ಮತಾಂತರವಾಗಿಬಿಡುತ್ತೀರಾ’ ಎಂದು ಹರಿಹಾಯ್ದರು.
ಸ್ಥಳದಲ್ಲಿದ್ದ ಶಾಸಕ ಕೆ.ಶ್ರೀನಿವಾಸ ಗೌಡ ತಡೆದರೂ ಕೇಳದ ಮುನಿಸ್ವಾಮಿ ಕೂಗಾಟ ಮುಂದುವರಿಸಿದರು ಎಂದು ತಿಳಿದುಬಂದಿದೆ.




