ಮೂರೂ ಕೃಷಿ ಕಾಯ್ದೆಗಳು ರದ್ದು:
ಪ್ರಧಾನಿ ನರೇಂದ್ರ ಮೋದಿ ಘೋಷಣೆ
ನವದೆಹಲಿ: ದೇಶದಾದ್ಯಂತ ರೈತರ ಹೋರಾಟ, ಪ್ರತಿಭಟನೆಗಳನ್ನು ಎದುರಿಸಿರುವ ಕೇಂದ್ರ ಸರ್ಕಾರದ ಮೂರೂ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ನಿರ್ಧರಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಘೋಷಿಸಿದರು. ಸುಮಾರು ಒಂದು ವರ್ಷದಿಂದ ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿಯ ಗಡಿ ಭಾಗಗಳಲ್ಲಿ ಹೋರಾಟ ನಡೆಸುತ್ತಿದ್ದಾರೆ.
‘ಮೂರು ಕೃಷಿ ಕಾಯ್ದೆಗಳ ಮೂಲಕ ಸರ್ಕಾರವು ಸಣ್ಣ ರೈತರ ಬೆಳವಣಿಗೆಯನ್ನು ಗುರಿಯಾಗಿಸಿಕೊಂಡಿತ್ತು. ಅವರು ಬೆಳೆಯುವ ಬೆಳೆಗೆ ಒಳ್ಳೆಯ ಬೆಲೆ ಸಿಗುವಂತೆ ಮಾಡಲು ಉದ್ದೇಶಿಸಲಾಗಿತ್ತು. ರೈತರು ಮತ್ತು ಕೃಷಿ ವಿಜ್ಞಾನಿಗಳು ಈ ಕಾಯ್ದೆಗಳಿಗಾಗಿ ಹಲವು ವರ್ಷಗಳಿಂದ ಕೇಳುತ್ತಿದ್ದರು. ಹಲವು ಸರ್ಕಾರಗಳು ಈ ಕಾಯ್ದೆಯನ್ನು ತರುವ ಬಗ್ಗೆ ಆಲೋಚಿಸುತ್ತಿದ್ದವು, ಆದರೆ ನಾವು ಕಾಯ್ದೆಯನ್ನು ಜಾರಿಗೆ ತಂದೆವು. ಕೋಟ್ಯಂತರ ರೈತರು ಈ ಮೂರೂ ಕೃಷಿ ಕಾಯ್ದೆಗಳನ್ನು ಸ್ವಾಗತಿಸಿದರು ಹಾಗೂ ಬೆಂಬಲ ನೀಡಿದರು. ಆ ಎಲ್ಲರಿಗೂ ನನ್ನ ಧನ್ಯವಾದಗಳು’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.





