ಉಪ್ಪಿಟ್ಟಿನಲ್ಲಿ ಹಾವಿನ ಮರಿ ಪತ್ತೆ:
ವಿದ್ಯಾವರ್ಧಕ ವಸತಿ ನಿಲಯದ ಐವರು ವಿದ್ಯಾರ್ಥಿಗಳು ಅಸ್ವಸ್ಥ
ಯಾದಗಿರಿ: ತಾಲ್ಲೂಕಿನ ಅಬ್ಬೆತುಮಕೂರು ಮಠದ ವಿಶ್ವರಾಧ್ಯ ವಿದ್ಯಾವರ್ಧಕ ವಸತಿ ನಿಲಯದಲ್ಲಿ ಗುರುವಾರ ಬೆಳಿಗ್ಗೆ ತಯಾರಿಸಿದ ಉಪ್ಪಿಟ್ಟಿನಲ್ಲಿ ಹಾವಿನ ಮರಿ ಪತ್ತೆಯಾಗಿದ್ದು, ಉಪಾಹಾರ ಸೇವಿಸಿದ ಐವರು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ.
ರಾಹುಲ್, ಮಲ್ಲಪ್ಪ, ವಿಶ್ವಕರ್ಣ, ಬಸವರಾಜ, ಯುವರಾಜ ವಿದ್ಯಾರ್ಥಿಗಳು ತಲೆ ಸುತ್ತು, ವಾಂತಿಯಿಂದ ಅಸ್ವಸ್ಥರಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
50 ಕ್ಕೂ ಹೆಚ್ಚು ವಿದ್ಯಾರ್ಥಿಗಳ ತಪಾಸಣೆ:
ಉಪಾಹಾರ ಸೇವಿಸಿದ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಆರೋಗ್ಯವನ್ನು ತಪಾಸಣೆ ಮಾಡಲಾಗಿದೆ. ಇದರಲ್ಲಿ ಐವರು ವಿದ್ಯಾರ್ಥಿಗಳು ಮಾತ್ರ ತಲೆ ಸುತ್ತು, ವಾಂತಿಯಿಂದ ಅಸ್ವಸ್ಥರಾಗಿದ್ದಾರೆ. ಉಳಿದವರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಜಿಲ್ಲಾಸ್ಪತ್ರೆಯ ವೈದ್ಯರು ಮಾಹಿತಿ ನೀಡಿದರು.
ಸ್ಥಳೀಯ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ವಿಷಯ ತಿಳಿಯುತ್ತಲೇ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ನಂತರ ವೈದ್ಯರಿಂದ ಮಾಹಿತಿ ಪಡೆದ ಅವರು, ಸದ್ಯಕ್ಕೆ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗಿಲ್ಲ. ಬಹುಶಃ ಉಪ್ಪಿಟ್ಟು ನಲ್ಲಿ ಪತ್ತೆಯಾಗಿರುವ ಹಾವಿನ ಮರಿ ಸತ್ತದ್ದಾಗಿದೆ. ಉಪಾಹಾರ ತಯಾರಿಸುವ ವೇಳೆ ಸ್ವಚ್ಛತೆ ಕಾಪಾಡ ಕಾರಣ ಇದು ಸಂಭವಿಸಿರುವ ಸಾಧ್ಯತೆ ಇದೆ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.





