ಕೊಡಂಗಾಯಿ: ಸಂಭ್ರಮದ ಸುದಿನವನ್ನು ಎದುರು ನೋಡುತ್ತಿದೆ: ಅಬೂ ಅಯಾನ್ ಕೊಡಂಗಾಯಿ
ಸುರತ್ಕಲ್- ಮೈಸೂರು ರಾಜ್ಯ ಹೆದ್ದಾರಿಯಲ್ಲಿರುವ ವಿಟ್ಲ ದಿಂದ ಸಾಲೆತ್ತೂರು ಕಡೆ ಸಾಗುವಾಗ ಸುತ್ತಲು ಹಚ್ಚ ಹಸುರಿನಿಂದ ಕೂಡಿ ಪ್ರಾಕೃತಿಕ ಸೌಂದರ್ಯ ದಿಂದ ಕಂಗೊಳಿಸುವ ಹೊಳೆ, ಬಯಲು,ತೋಟಗಳು, ನಿತ್ಯ ಹರಿದ್ವರ್ಣದ ಕಾಡಿನ ದೃಶ್ಯಗಳಿಂದ ಪ್ರಕೃತಿ ರಮಣೀಯವಾದ ಸುಂದರ ಊರು ಕೊಡಂಗಾಯಿ. ಜಿಲ್ಲಾ ಕೇಂದ್ರದಿಂದ ಸುಮಾರು 45 ಕಿಮೀ, ತಾಲೂಕು ಕೇಂದ್ರದಿಂದ ಹದಿನೈದು ಕಿಲೋಮೀಟರ್ ದೂರದ ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿಯ ಹೆಸರು ತಿಳಿಯದವರು ಜಿಲ್ಲೆಯಲ್ಲಿ ಅತೀ ವಿರಳ.
ಜಾತಿ,ಧರ್ಮ, ಪಕ್ಷ ಬೇದ ಮರೆತು ಶಾಂತಿ, ಮತ ಸೌಹಾರ್ದತೆಯನ್ನು ಕಾಪಾಡುವಲ್ಲಿ ನಮ್ಮೂರಿನ ಪ್ರತಿಯೊಬ್ಬರೂ ಯಶಕಂಡಿದ್ದಾರೆ. ಇಲ್ಲಿನ ಧಾರ್ಮಿಕ ಇತಿಹಾಸ ಕೂಡಾ ರಮಣೀಯ. ಹಿಂದಿನ ಕಾಲದಿಂದಲೇ ಇಸ್ಲಾಮಿನ ಆಚಾರ,ವಿಚಾರಗಳಲ್ಲಿ ನಿಷ್ಠಾವಂತ ಅನುಯಾಯಿಗಳಾಗಿ ಅಹ್ಲು ಸುನ್ನತ್-ವಲ್-ಜಮಾಅತಿನ ಆಶಯ-ಆದರ್ಶಗಳನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಜೀವಿಸುತ್ತಾ ಬಂದ ಹಿರಿಯ ತಲೆಮಾರಿನ ವ್ಯಕ್ತಿಗಳಿಂದ ಸಂಪ್ರದಾಯವನ್ನು ಕಾಯ್ದುಕೊಂಡು ಬಂದ ಒಂದು ಸುಂದರ ನಾಡು ನಮ್ಮೂರು ಕೊಡಂಗಾಯಿ. ಮತಸೌಹಾರ್ದತೆಯ ನೆಲೆವೀಡು.
ಇಂದಿಗೂ ಕೊಡಂಗಾಯಿಯಲ್ಲಿ ಹಲವಾರು ಸಂಘಟನೆಗಳು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ರಂಗಗಳಲ್ಲಿ ಸಕ್ರಿಯವಾಗಿವೆ. ಕೊಡಂಗಾಯಿಯ ಹಲವಾರು ಉಸ್ತಾದರು ರಾಜ್ಯದ,ಜಿಲ್ಲೆಯ ಹಲವು ಕಡೆ ಮಸೀದಿ,ಮದ್ರಸ ಗಳಲ್ಲಿ ಧಾರ್ಮಿಕ ಸೇವೆಯಲ್ಲಿದ್ದು ತಮ್ಮ ನಿಷ್ಕಳಂಕ ಪ್ರೀತಿ,ಸೇವೆಯ ಕಾರಣದಿಂದಾಗಿ ಆಯಾ ಊರಿನ ಹೆಸರಿನೊಂದಿಗೆ ತಮ್ಮನ್ನು ಗುರುತಿಸಿ ಕೊಳ್ಳುತ್ತಿರುವುದು ನಮ್ಮೂರು ಕೊಡಂಗಾಯಿಯ ಮತ್ತೊಂದು ವೈಶಿಷ್ಟ.
ಕೊಡಂಗಾಯಿ ಕೇಂದ್ರ ಸ್ಥಳದ ಹೊಳೆ ಬದಿಯಲ್ಲೇ ಇರುವ ಕೊಡಂಗಾಯಿ ಮುಹ್ಯುದ್ದೀನ್ ಜುಮಾ ಮಸ್ಜಿದ್ ಗೆ ಶತಮಾನದ ಇತಿಹಾಸವಿದೆ. ಸುಮಾರು ನೂರ ಮುವತ್ತು ವರ್ಷಗಳ ಹಿಂದೆ ಪರ್ತಿಪ್ಪಾಡಿ ಜುಮಾ ಮಸೀದಿಯಿಂದ ಕವಲೊಡೆದು ಸ್ಥಾಪನೆಯಾದ ಈ ಮಸ್ಜಿದ್ ಗೆ ಉದ್ಯಾವರದ ಉಮ್ಮಚ್ಚಿಕೋಯ ತಂಙಳ್ ರವರು ಶಿಲಾನ್ಯಾಸ ಮಾಡಿದ ದಾಖಲೆ ಇದೆ. ಇಂದಿಗೂ ಅದೇ ಅಹ್ಲುಬೈತ್ ಪರಂಪರೆಯ ಬಾಂಧವ್ಯವನ್ನು ಈ ಜಮಾಅತರು ಉಳಿಸಿಕೊಂಡು ಬಂದಿದ್ದಾರೆ. ಉಮ್ಮಚ್ಚಿಕೋಯ ತಂಙಳ್ ಅವರ ವಫಾತ್ ನಂತರ ಅವರ ಪುತ್ರ ಹಸನ್ ಕೋಯ ತಂಙಳ್ ಇಲ್ಲಿನ ಮಾರ್ಗದರ್ಶಕರಾಗಿ ಮುಂದುವರಿದಿದ್ದರು. ಇದೀಗ ಅವರ ಪುತ್ರ ಉದ್ಯಾವರ ಪೂಕುಞ್ಞಿ ತಂಙಳ್ ಗೌರವಾಧ್ಯಕ್ಷರಾಗಿ ನೇತೃತ್ವ ಕೊಡುತ್ತಿದ್ದಾರೆ.
ಕಾಲ ಕಳೆದಂತೆ ನಾಡುಗಳು ವಿಸ್ತಾರವಾಗಿ ಜನಸಂಖ್ಯೆ ಜಾಸ್ತಿಯಾಗುತ್ತಾ ಬಂದಂತೆ ಮಸ್ಜಿದ್ ಗಳ ಸಂಖ್ಯೆ ಹೆಚ್ಚುತ್ತಾ ಬರುವುದು ಸಹಜ ಹಾಗೂ ಅನಿವಾರ್ಯ ಕೂಡಾ. ಹಾಗೆ ಅನಿವಾರ್ಯತೆಯಿಂದ ಕಾಲಕ್ರಮೇಣ ಕೊಡಂಗಾಯಿ ಮಸೀದಿಯ ಜಮಾಅತ್ ಗೊಳಪಟ್ಟಿದ್ದ ಆಸು ಪಾಸಿನ ಕುಕ್ಕಿಲ, ಶಾರ್ನೋಜಿ,ಕಡಂಬು,ಕೊಡಂಗೆ ಒಕ್ಕೆತ್ತೂರು,ಕೆಲಿಂಜದ ಸ್ವಲ್ಪ ಭಾಗ ಹೀಗೆ.. ಮುಂತಾದ ನಾಡುಗಳಲ್ಲಿ ಸ್ವತಂತ್ರ ಮಸ್ಜಿದ್ ಗಳು ಸ್ಥಾಪನೆಯಾಗಿ ಕೊಡಂಗಾಯಿಯಿಂದ ಟಿಸಿಲೊಡೆದ ಮೊಹಲ್ಲಾಗಳಾಗಿ ಮಾರ್ಪಟ್ಟವು.
ಕೊಡಂಗಾಯಿಯಲ್ಲೂ ಮುಸ್ಲಿಮ್ ಜನದಟ್ಟಣೆಯಿಂದಾಗಿ ಪುರಾತನ ಮಸ್ಜಿದ್ ಕಟ್ಟದಲ್ಲಿ ಜಾಗದ ಅಭಾವ ತಲೆದೋರಿರುವುದರಿಂದ ನವೀಕರಣ ಅನಿವಾರ್ಯವಾಗಿತ್ತು. ಹಾಗೆ ಜಮಾಅತರ ನಿರ್ಧಾರದ ಮೇರೆಗೆ ಹಳೆ ಕಟ್ಟಡವನ್ನು ಕೆಡಹಿ ಆಧುನಿಕ ಕಾಲದಲ್ಲಿ ಅತ್ಯಾವಶ್ಯಕ ಎಂಬಂತೆ ಆತ್ಯಾಧುನಿಕ ಶೈಲಿಯಲ್ಲಿ ಭವ್ಯವಾದ ಹೊಸ ಮಸ್ಜಿದ್ ಕಟ್ಟಡ ನಿರ್ಮಾಣಕ್ಕೆ ಕಳೆದ ನಾಲ್ಕೈದು ವರ್ಷಗಳ ಹಿಂದೆ ನಮ್ಮ ಜಮಾಅತಿನ ಸದಸಸ್ಯರ ಒಕ್ಕೊರಲಿನಿಂದ ತೀರ್ಮಾನಿಸಿದ್ದರು.
ಅಲ್ಲಾಹನ ಅಪಾರ ಅನುಗ್ರಹದಿಂದ ಅಂದಿನ ಕನಸು ಇದೀಗ ನನಸಾಗಿ ನಾಡಿನ ಅಭಿಮಾನದ ಸಂಕೇತವಾಗಿ ಉದ್ಘಾಟನೆಯ ಹೊಸ್ತಿಲಲ್ಲಿದೆ. ನಾಡಿನ ಸರ್ವಜನರು ಆ ಶುಭ ಘಳಿಗೆಯನ್ನು ಎದುರು ನೋಡುತ್ತಿದ್ದಾರೆ. ಇದೇ ಬರುವ 2023 ನೇ ಫೆಬ್ರವರಿ 26 ಭಾನುವಾರ ನಮ್ಮ ಜಮಾಅತಿನ ಅಧ್ಯಕ್ಷರಾದ ಎ ಎಂ ಮಹಮ್ಮದ್ ಕುಂಞ ರವರ ಅಧ್ಯಕ್ಷತೆಯಲ್ಲಿ ನಮ್ಮ ಜಮಾಅತಿನ ಗೌರವಾನ್ವಿತ ಗೌರವಧ್ಯಕ್ಷರಾದ ಅಸ್ಸಯ್ಯಿದ್ ಪೂಕುಂಞ ತಂಙಳ್ ಉದ್ಯಾವರ ರವರು ಬೆಳಿಗ್ಗೆ ಧ್ವಜಾರೋಹಣ ಮಾಡುವ ಮೂಲಕ ಉದ್ಘಾಟನೆ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಿರುವರು. ನಂತರ ನಡೆಯಲಿರುವ ನವೀಕೃತ ಮುಹ್ಯಿದ್ದೀನ್ ಜುಮಾ ಮಸ್ಜಿದ್ ನ ಸಂಭ್ರಮದ ಉದ್ಘಾಟನಾ ಸಮಾರಂಭದಲ್ಲಿ ಸಾದಾತ್ ಕುಟುಂಬದ ಅಸ್ಸಯ್ಯಿದ್ ಪೂಕುಂಞ ತಂಙಳ್ ಉದ್ಯಾವರ ಇವರ ಘನ ಅಧ್ಯಕ್ಷತೆಯಲ್ಲಿ ಸಯ್ಯಿದ್ ವಂಶದ ಕಣ್ಮಣಿ ಪಾಣಕ್ಕಾಡ್ ಮನೆತನದ ಬಹು: ಅಸ್ಸಯ್ಯದ್ ಹಮೀದಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ರವರ ಅಮೃತ ಹಸ್ತದಿಂದ ಅಧಿಕೃತ ವಾಗಿ ನವೀಕೃತ ಮುಹ್ಯಿದ್ದೀನ್ ಜುಮಾ ಮಸ್ಜಿದ್ ನ ಉದ್ಘಾಟನೆಗೊಳ್ಳಲಿದೆ. ತದನಂತರ ಮಸ್ಜಿದ್ ವಕ್ಫ್ ಕಾರ್ಯವನ್ನು ಉಡುಪಿ ಜಿಲ್ಲಾ ಸಂಯುಕ್ತ ಖಾಝಿ, ಮಾಣಿ ದಾರುಲ್ ಇರ್ಶಾದ್ ಎಜುಕೇಶನ್ ಸೆಂಟರ್ ಇದರ ಶಿಲ್ಪಿ ಬಹು: ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ರವರು ನಡೆಸಿಕೊಡಲಿದ್ದಾರೆ. ನಂತರ ನಡೆಯುವ ಸಭಾ ಕಾರ್ಯಕ್ರಮವನ್ನು ಮಂಗಳೂರು ಖಾಝಿ ಬಹು: ತ್ವಾಖಾ ಅಹ್ಮದ್ ಮುಸ್ಲಿಯಾರ್ ರವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಂಬ್ರಾಣ ಉಸ್ತಾದ್,ಶಾಫಿ ಸ’ಅದಿ ಉಸ್ತಾದ್,ವಾಲೆಮುಂಡಾವು ಉಸ್ತಾದ್,ಕೆ ಬಿ ದಾರಿಮಿ ಉಸ್ತಾದ್,ಸ್ಥಳಿಯ ಖತೀಬ್ ಸಿದ್ದೀಖ್ ಅರ್ಶದಿ ಉಸ್ತಾದ್ ಹಾಗೂ ನಮ್ಮ ಮಸೀದಿಯಲ್ಲಿ ಇಮಾಮರಾಗಿ ಸೇವೆ ಸಲ್ಲಿಸಿದ ಊರಿನ ಪರ ಊರಿನ ಉಸ್ತಾದರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿರುವುದು. ಕಾರ್ಯ ಕ್ರಮದಲ್ಲಿ ನಮ್ಮ ಬಂಟ್ವಾಳದ ಶಾಸಕರಾದ ರಾಜೇಶ್ ನಾಯಕ್, ಮಾಜಿ ಮಂತ್ರಿಗಳಾದ ರಮನಾಥ ರೈ, ಯು ಟಿ ಕಾದರ್, ಮಂಜುನಾಥ ಭಂಡಾರಿ,ಬಿ ಎಂ ಫಾರೂಕು,ಮಹಮ್ಮದ್ ಕುಂಞ ವಿಟ್ಲ,ಶಾಕಿರ್ ಅಲಕೆಮಜಲು ಹಾಗೂ ಧಾರ್ಮಿಕ, ಸಾಮಾಜಿಕ, ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ.
ಮಸ್ಜಿದ್ ಉದ್ಘಾಟನೆಯ ಅಂಗವಾಗಿ 26 ರಂದು ರಾತ್ರಿ ಅಂತರಾಜ್ಯ ಮಟ್ಟದ ದಫ್ ಸ್ಪರ್ದೆ ಹಾಗೂ 27/28 ದ್ವೀದಿನ ಧಾರ್ಮಿಕ ಮತ ಪ್ರಭಾಷಣ ನಡೆಯಲಿರುವುದು.
ಮೂರು ದಿನಗಳಲ್ಲಿ ನಡೆಯುವ ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಲು ಊರಿನ ಪರವೂರಿನ ದೀನಿ ಪ್ರೇಮಿಗಳಾದ ತಮ್ಮೆಲ್ಲರನ್ನು ಆತ್ಮೀಯವಾಗಿ ಸ್ವಾಗತಿಸುತ್ತೇವೆ.





