ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಯತ್ನ: ಮಹಿಳೆ ಸಾವು
ರಾಮನಗರ: ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಯತ್ನಿಸಿರುವ ಹೃದಯವಿದ್ರಾವಕ ಘಟನೆ ರಾಮನಗರದಲ್ಲಿ ನಡೆದಿದೆ.
ರಾಜು ಪತ್ನಿ ಮಂಗಳಮ್ಮ (28) ಸಾವನ್ನಪ್ಪಿದ್ದರೆ, ರಾಜು(31), ಅತ್ತೆ ಸೊಲ್ಲಾಪುರದಮ್ಮ (48), ಮಕ್ಕಳಾದ ಆಕಾಶ್ (9), ಕೃಷ್ಣ (13), ಹಾಗೂ ಮಂಗಳಮ್ಮ ತಂಗಿ ಸವಿತಾ (24), ಸವಿತಾ ಮಗಳು ದರ್ಶಿನಿ (4) ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
ತಾನು ಮಾತ್ರ ಸತ್ತರೆ ಕುಟುಂಬಸ್ಥರಿಗೆ ಸಾಲಗಾರರ ಕಾಟ ತಪ್ಪುವುದಿಲ್ಲ ಎಂದು ಎಲ್ಲರಿಗೂ ವಿಷವುಣಿಸುವ ನಿರ್ಧಾರ ರಾಜು ಮಾಡಿದ್ದ. ಸದ್ಯ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ರಾಜು ಸಾಲಗಾರರ ಕಾಟಕ್ಕೆ ಈ ರೀತಿಯ ತೀರ್ಮಾನ ಮಾಡಿದ್ದ. ನನ್ನ ತಮ್ಮ ಹಾಗೂ ಸ್ನೇಹಿತರು ಸೇರಿ ಸಾಲವನ್ನು ನನ್ನ ಮೇಲೆ ಹೊರಿಸಿದ್ದಾರೆ ಎಂದಿದ್ದಾನೆ.
ಗುರುವಾರ ಮಧ್ಯಾಹ್ನ ಇಡೀ ಕುಟುಂಬ ಆತ್ಮಹತ್ಯೆಯ ನಿರ್ಧಾರ ಮಾಡಿತ್ತು. ಊರ ಹೊರಗಿದ್ದ ರಾಜು ಮಾವನ ಸಮಾಧಿ ಬಳಿಗೆ ತೆರಳಿದ್ದ ಕುಟುಂಬ, ಊಟ ಹಾಗೂ ತಿಂಡಿಗಳ ಜೊತೆ ಇಲಿ ಪಾಷಾಣ ಸೇವಿದ್ದಾರೆ. ಬಳಿಕ ಸಕ್ಕರೆ ಅಚ್ಚು, ಬಾಳೆ ಹಣ್ಣು ತಿಂದಿದ್ದರು. ತಲಾ 2 ಪ್ಯಾಕೆಟ್ ಇಲಿ ಪಾಷಾಣ ಸೇವಿಸಿದ್ದ 7 ಮಂದಿ ಸಾವಿಗಾಗಿ ಕಾದು ಸಮಾಧಿ ಬಳಿಯೇ ಕೆಲಕಾಲ ಕುಳಿತಿದ್ದರು.