ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರ ನಡುವೆ ಹೊಡೆದಾಟ: ಆಸ್ಪತ್ರೆಗೆ ದಾಖಲು
ಬೀದರ್: ನಗರದಲ್ಲಿ ಫೆಬ್ರುವರಿ 3ರಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ‘ಪ್ರಜಾಧ್ವನಿ’ ಯಾತ್ರೆಯ ಪೂರ್ವ ಸಿದ್ಧತಾ ಸಭೆಯಲ್ಲಿ ಗುರುವಾರ ಕ್ಷುಲ್ಲಕ ಕಾರಣಕ್ಕಾಗಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರು ಹೊಡೆದಾಡಿದ್ದಾರೆ. ಘಟನೆಯಲ್ಲಿ ಎಐಸಿಸಿ ಸದಸ್ಯ ಆನಂದ ದೇವಪ್ಪಗೆ ಗಾಯವಾಗಿದೆ.
ಯಾತ್ರೆಯ ಸಂಯೋಜಕ ಪ್ರಕಾಶ ರಾಠೋಡ ನೇತೃತ್ವದಲ್ಲಿ ನಗರದ ಅತಿಥಿಗೃಹದಲ್ಲಿ ಸಭೆ ನಡೆದಿತ್ತು. ಬಸವಕಲ್ಯಾಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ಹಾಗೂ ಇತರ ಮುಖಂಡರು ಸಭೆಯಲ್ಲಿ ಹಾಜರಿದ್ದರು. ಕಾರ್ಯಕ್ರಮದ ಲೆಕ್ಕಪತ್ರದ ವಿಷಯ ಪ್ರಸ್ತಾಪವಾದಾಗ
ಎಐಸಿಸಿ ಸದಸ್ಯ ಆನಂದ ದೇವಪ್ಪ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಬೆಂಬಲಿಗರ ಮಧ್ಯೆ ಜಗಳ ನಡೆಯಿತು.
ಪ್ರಕಾಶ ರಾಠೋಡ ಎದುರಲ್ಲೇ ಪರಿಸ್ಥಿತಿ ಕೈಮೀರಿ ಹೋಗಿ ಎರಡೂ ಕಡೆಯವರು ಹೊಡೆದಾಡಿದರು. ಈ ಸಂದರ್ಭದಲ್ಲಿ ಆನಂದ ದೇವಪ್ಪ ಅವರಿಗೆ ಪೆಟ್ಟಾಗಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.