ವಿವಾಹಿತ ಮಹಿಳೆ ಜತೆ ವಿಟ್ಲದ ಬಿಜೆಪಿ ಮುಖಂಡ: ರೆಡ್ ಹ್ಯಾಂಡಾಗಿ ಕಾರನ್ನು ಅಡ್ಡಗಟ್ಟಿದ ಮಹಿಳೆಯ ಪತಿ: ಬಿಜೆಪಿ ಮುಖಂಡ ವಿರುದ್ಧ ಪೊಲೀಸರಿಗೆ ದೂರು
ಸುಳ್ಯ: ವಿವಾಹಿತ ಮಹಿಳೆಯ ಜೊತೆ ವಿಟ್ಲದ ಬಿಜೆಪಿ ಮುಖಂಡ ತೆರಳುತ್ತಿದ್ದಾಗ ಮಹಿಳೆಯ ಪತಿ ಅವರಿಬ್ಬರನ್ನು ಚೇಸ್ ಮಾಡಿ ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ಸುಳ್ಯ ತಾಲೂಕಿನ ಜಾಲ್ಸೂರಿನಲ್ಲಿ ನಡೆದಿದ್ದು, ಈ ವೇಳೆ ಆತ ಮಹಿಳೆ ಹಾಗೂ ಕಾರನ್ನು ಬಿಟ್ಟು ಪಕ್ಕದ ಕಾಡಿನಲ್ಲಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಘಟನೆಯ ವೀಡಿಯೋ ಹಾಗೂ ಫೋಟೊಗಳು ಸಾಮಾಜಿಕ
ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಕಾರನ್ನು ಅಡ್ಡಗಟ್ಟಿ ನಿಲ್ಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ, ಕಾರನ್ನು ತಡೆಗಟ್ಟಿ ನಿಲ್ಲಿಸಿದ ವ್ಯಕ್ತಿಯು ತನ್ನ ಪತ್ನಿ ಮತ್ತು ಆಕೆಯ ಜೊತೆ ಅನೈತಿಕ ಸಂಬಂಧ ಹೊಂದಿರುವ ವ್ಯಕ್ತಿಯ ವಿರುದ್ಧ ಪುತ್ತೂರು ಸಹಾಯಕ ಅಧೀಕ್ಷಕರಿಗೆ ದೂರು ನೀಡಿದ್ದಾನೆ.
ಬಂಟ್ವಾಳ ತಾಲೂಕು ಪೆರುವಾಯಿ ಕಿಣಿಯರ್ ನಿವಾಸಿ ಸುಧೀರ್ ಕುಮಾರ್ ಎಂಬವರು ಬಂಟ್ವಾಳ ತಾಲೂಕು ಕೇಪು ಗ್ರಾಮ ಮುಳಿಯಾಲ ಮುಗೇರು ನಿವಾಸಿ, ಬಿಜೆಪಿ ಮುಖಂಡ ಹರಿಪ್ರಸಾದ್ ಯಾದವ್ ಮತ್ತು ಮೂಲತಃ ಕಾಸರಗೋಡು ಕುಂಬ್ಡಾಜೆ ಪ್ರಸ್ತುತ ಆಳಕೆ ನಿವಾಸಿ ಮಹಿಳೆಯ ವಿರುದ್ಧ ಠಾಣೆಗೆ ದೂರು ನೀಡಿದ್ದಾರೆ.
ಸುಧೀರ್ ರವರು 2014 ರಲ್ಲಿ ಕಾಸರಗೋಡು ಕುಂಬ್ಡಾಜೆ ಪ್ರಸ್ತುತ ಆಳಕೆ ನಿವಾಸಿ ಮಹಿಳೆಯನ್ನು ವಿವಾಹವಾಗಿದ್ದು, ಅವರಿಬ್ಬರಿಗೆ ಎಂಟು ವರ್ಷದ ಹೆಣ್ಣು ಮಗುವೊಂದಿದ್ದು, ಈ ಮಧ್ಯೆ ಮಹಿಳೆ ಹರಿಪ್ರಸಾದ್ ಯಾದವ್ ಅವರೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದು, ಈ ಹಿನ್ನೆಲೆ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಆದರೇ ಇಬ್ಬರ ನಡುವೆ ಯಾವುದೇ ವಿಚ್ಚೇಧನ ಆಗಿರುವುದಿಲ್ಲ.
ಜ.31 ರಂದು ಮಹಿಳೆ ಜಾತ್ರೆಗೆಂದು ಹೋಗಿದ್ದು, ಈ ವೇಳೆ ಹರಿಪ್ರಸಾದ್ ಆಕೆಗೆ ಮದುವೆಯಾಗಿದೆ ಎಂದು ತಿಳಿದಿದ್ದರು ಅವಳೊಂದಿಗೆ ಅನೈತಿಕ ಸಂಬಂಧವನ್ನು ನಡೆಸುವ ದುರುದ್ದೇಶದಿಂದ ಕಾರಿನಲ್ಲಿ ಕರೆದುಕೊಂಡು ಹೋಗಿದ್ದು, ಈ ಬಗ್ಗೆ ಮಾಹಿತಿ ತಿಳಿದ ಸುಧೀರ್ ಕಾರನ್ನು ಹಿಂಬಾಲಿಸಿಕೊಂಡು ಬಂದು ಸುಳ್ಯ ತಾಲೂಕಿನ ಜಾಲ್ಸೂರು ಎಂಬಲ್ಲಿ ತಲುಪಿದಾಗ ಕಾರನ್ನು ನಿಲ್ಲಿಸಲು ಹೇಳಿದಾಗ ನಿಲ್ಲಿಸದೆ ಕಾರನ್ನು ಸುಧೀರ್ ರವರ ಮೇಲೆಯೇ ಹಾಯಿಸಿ ಕೊಲ್ಲುವ ಯತ್ನ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಈ ವೇಳೆ ಸ್ಥಳೀಯರನ್ನು ಕಂಡ ಹರಿಪ್ರಸಾದ್ ರವರು ಸ್ಥಳದಿಂದ ಓಡಿ ಹೋಗಿದ್ದು, ಕಾರಿನಲ್ಲಿದ್ದ ಪತ್ನಿಯನ್ನು ಪ್ರಶ್ನಿಸಿದಾಗ ನನ್ನನ್ನು ತಡೆದರೆ ಮುಂದೆ ನಿನ್ನನ್ನು ರೌಡಿಗಳ ಮೂಲಕ ಕೊಲ್ಲಿಸುವುದಾಗಿ ಜೀವ ಬೆದರಿಕೆ ಹಾಕಿದ್ದು, ನನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಳ್ಳುವ ದುರುದ್ದೇಶದಿಂದ ಅವಳನ್ನು ಪುಸಲಾಯಿಸಿ ಆತನ ಕಾರಿನಲ್ಲಿ ಕುಳ್ಳಿರಿಸಿಕೊಂಡು ಹೋಗಿರುವುದಲ್ಲದೇ ಅದನ್ನು ತಿಳಿದು ನಾನು ತಡೆಯಲು ಹೋದಾಗ ನನ್ನ ಮೇಲೆ ಆತನ ಕಾರನ್ನು ಹಾಯಿಸಿ ಕೊಲೆ ಮಾಡಲು ಯತ್ನಿಸಿರುವುದಾಗಿ ಸುಧೀರ್ ರವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಿಜೆಪಿ ಮುಖಂಡ ಹರಿಪ್ರಸಾದ್ ಯಾದವ್ ರವರು ಪ್ರತಿಕ್ರಿಯಿಸಿದ್ದು, ‘ನಾನು ಕಾರಿನಲ್ಲಿ ಇದ್ದಿಲ್ಲ, ಪುತ್ತೂರಿನಲ್ಲಿ ಪಕ್ಷದ ಕಾರ್ಯಚಟುವಟಿಕೆಯಲ್ಲಿ ನಿರತನಾಗಿದ್ದೆ. ಮಹಿಳೆಗೆ ಸುಳ್ಯಕ್ಕೆ ಡ್ರಾಪ್ ಕೊಡಲು ಚಾಲಕನನ್ನು ಕಳುಹಿಸಿದ್ದೆ., ನನ್ನ ಏಳಿಗೆ ಸಹಿಸದ ಸುಧೀರ್ ವೈಯಕ್ತಿಕ ದ್ವೇಷದಿಂದ ಈ ರೀತಿ ಮಾಡ್ತಿದ್ದಾನೆ’ ಎಂದು ಅವರು ತಿಳಿಸಿದ್ದಾರೆ.