ಬಿಹಾರದಲ್ಲಿ ರಸ್ತೆ ಅಪಘಾತ:
ನಟ ಸುಶಾಂತ್ ಸಿಂಗ್ ರಜಪೂತ್ ಕುಟುಂಬದ ಐವರು ಮೃತ್ಯು
ಪಾಟ್ನಾ: ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಕುಟುಂಬದ ಐವರು ಅಪಘಾತದಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ಬಿಹಾರದಲ್ಲಿ ನಡೆದಿದೆ. ಪಾಟ್ನಾದಿಂದ ಬಾಂಧರ್ ಗ್ರಾಮಕ್ಕೆ ಇವರೆಲ್ಲಾ ಪ್ರಯಾಣಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಅಪಘಾತದಲ್ಲಿ ಒ.ಪಿ.ಸಿಂಗ್ ಅವರ ಬಾವ, ರಜಪೂತ್ ಅವರ ಬಾವ ಹಾಗೂ ಇತರ ಸಂಬಂಧಿಗಳು ಸಾವನ್ನಪ್ಪಿದ್ದಾರೆ. ಸುಶಾಂತ್ ಅವರ ಕುಟುಂಬದ ಸದಸ್ಯರು ಪ್ರಯಾಣಿಸುತ್ತಿದ್ದ ವಾಹನ ಎದುರಿನಿಂದ ಸಿಲಿಂಡರ್ ಗಳನ್ನು ಹೊತ್ತು ಬಂದ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿತ್ತು. ಡ್ರೈವರ್ ಸೇರಿದಂತೆ ಆರು ಮಂದಿ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಒ.ಪಿ.ಸಿಂಗ್ ಐಪಿಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಹರ್ಯಾಣದಲ್ಲಿ ಎಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವರದಿಗಳ ಪ್ರಕಾರ, ಸುಶಾಂತ್ ಸಿಂಗ್ ಸಹೋದರಿ ಸೋಮವಾರ ನಿಧನರಾಗಿದ್ದರು.
ಮಂಗಳವಾರ ಜಮುಯಿಯಲ್ಲಿ ನಡೆಯಲಿದ್ದ ಅಂತ್ಯ ಸಂಸ್ಕಾರ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ನಡೆದಿತ್ತು.





