ಮಂಗಳೂರು: ಡ್ರಗ್ ಪೂರೈಕೆ, ಸೇವನೆ ಪ್ರಕರಣ: ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳನ್ನು ಸೂಕ್ತ ವಿಚಾರಣೆ ನಡೆಸದೇ ಕಮಿಷನರ್ ಕರ್ತವ್ಯಲೋಪ ಎಸಗಿದ್ದಾರೆ: ಮನೋರಾಜ್, ಡಾ ಮಹಬಲೇಶ್ ಶೆಟ್ಟಿ ಆರೋಪ
ಮಂಗಳೂರು: ಮಂಗಳೂರಿನಲ್ಲಿ ಡ್ರಗ್ ಪೂರೈಕೆ ಮತ್ತು ಸೇವನೆಯಲ್ಲಿ ಸಿಕ್ಕಿ ಬಿದ್ದ ನಗರದ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನ ವೈದ್ಯರು ಮತ್ತು ವಿದ್ಯಾರ್ಥಿಗಳನ್ನು ಸೂಕ್ತ ವಿಚಾರಣೆ ನಡೆಸದೇ ಮಂಗಳೂರು ನಗರ ಪೊಲೀಸ್ ಕಮಿಷನರ್ ಕರ್ತವ್ಯಲೋಪ ಎಸಗಿದ್ದಾರೆ ಎಂದು ನ್ಯಾಯವಾದಿ ಹಾಗು ಬಾರ್ ಅಸೋಸಿಯೇಶನ್‌ನ ಉಪಾಧ್ಯಕ್ಷ ಮನೋ ರಾಜ್ ಮತ್ತು ವಿಧಿವಿಜ್ಞಾನ ತಜ್ಞ ಡಾ ಮಹಬಲೇಶ್ ಶೆಟ್ಟಿ ಆರೋಪಿಸಿದ್ದಾರೆ.
ಮಂಗಳೂರಿನ ಪತ್ರಿಕಾ ಭವನದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ವಶಕ್ಕೆ ಪಡೆದುಕೊಂಡ ಆರೋಪಿಗಳನ್ನು ಕಮಿಷನರ್ ಅವರು ಸರಿಯಾಗಿ ವಿಚಾರಣೆ ಮಾಡಿದ್ದಾರೋ ಇಲ್ಲವೋ ಎಂಬ ಬಗ್ಗೆ ನಮಗೆ ಅನುಮಾನ ಇದೆ ಎಂದರು.
ಇನ್ನು ಕೆಲವೊಂದು ಪ್ರೊಸೀಜರ್ ಲ್ಯಾಪ್ಸ್ ಆಗಿದೆ. ನಮಗೆ ಕೆಲವೊಂದು ಅನುಮಾನಗಳಿವೆ. ಅವರು ಡ್ರಗ್ ಸೇವನೆ ಮಾತ್ರ ಮಾಡಿದ್ದರೆ ಅವರನ್ನು ರಿಹ್ಯಾಬ್ಲಿಟೇಶನ್ ಸೆಂಟರ್ ಗೆ ಕಳುಹಿಸಬೇಕಾಗಿತ್ತು ಎಂದಿದ್ದಾರೆ.
ಕಮಿಷನರ್ ಅವರು ಡ್ರಗ್ ಅಬ್ಯೂಶರನ್ನು ಪೆಡ್ಲರ್ ಎಂದು ಹೇಳಿದ್ದಾರೆ. 20 ದಿನ ಕಾಲ ಬಂಧನದಲ್ಲಿಟ್ಟಿದ್ದಾರೆ. ವಿದ್ಯಾರ್ಥಿಗಳ, ಅವರ ತಂದೆ ತಾಯಿಯರ ವಿವರಣೆ ಪತ್ರಿಕೆಗಳಿಗೆ ಕೊಟ್ಟು ಅವರ ಪ್ರತಿಷ್ಟೆ ಹಾಳಾಗಿದೆ ಎಂದರು.
ನಿಜವಾಗಿಯೂ ಈ ಪ್ರಕರಣದಲ್ಲಿ ತಪ್ಪಿತಸ್ಥರಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿ ನಮ್ಮ ಅಡ್ಡಿ ಏನೂ ಇಲ್ಲ. ಆದರೆ ಅಮಾಯಕರನ್ನು ಕಸ್ಟಡಿಗೆ ಕಳಿಸಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.




