500 ರೂ.ಗೆ ಗ್ಯಾಸ್ ಸಿಲಿಂಡರ್, ಅಗ್ಗದ ಬೆಲೆಗೆ ಪೆಟ್ರೋಲ್ ಮತ್ತು ಡೀಸೆಲ್:
ದೇಶದ ಜನತೆಗೆ ಪತ್ರ ಬರೆಯುವ ಮೂಲಕ ಭರವಸೆ ನೀಡಿದ ರಾಹುಲ್ ಗಾಂಧಿ
ನವದೆಹಲಿ: 500 ರೂ.ಗೆ ಗ್ಯಾಸ್ ಸಿಲಿಂಡರ್, ಅಗ್ಗವಾದ ಪೆಟ್ರೋಲ್ ಮತ್ತು ಡೀಸೆಲ್, ಉದ್ಯೋಗ ನೀಡೋದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದ ಜನತೆಗೆ ಪತ್ರ ಬರೆಯುವ ಮೂಲಕ ಭರವಸೆ ನೀಡಿದ್ದಾರೆ.
ರಾಹುಲ್ ಗಾಂಧಿ ಕೈಗೊಂಡಿರುವ ʻಭಾರತ್ ಜೊಡೋ ಯಾತ್ರೆʼ ಇನ್ನೇನು ಮುಕ್ತಾಯ ಹಂತಕ್ಕೆ ತಲುಪುತ್ತಿದ್ದು, ಈ ಹೊತ್ತಲ್ಲೇ ರಾಹುಲ್ ಗಾಂಧಿ ದೇಶದ ಜನತೆಗೆ ಪತ್ರ ಬರೆದಿದ್ದು, ಜನರ ಅನೇಕ ಸಮಸ್ಯೆಗಳನ್ನ ಈಡೇರಿಸೋದಾಗಿ ತಿಳಿಸಿದ್ದಾರೆ.
ಜನವರಿ 26 ರಿಂದ ಕೇಂದ್ರ ಸರ್ಕಾರದ ವಿರುದ್ಧ ಚಾರ್ಜ್ ಶೀಟ್ ಜೊತೆಗೆ ರಾಹುಲ್ ಗಾಂಧಿಯವರ ಪತ್ರವನ್ನು ಪ್ರತಿ ಮನೆಗೆ ತಲುಪಿಸುವುದಾಗಿ ಪಕ್ಷವು ಶುಕ್ರವಾರ ಪ್ರಕಟಿಸಿದೆ. ಪತ್ರಕ್ಕೆ ‘ಆಪ್ಕಾ ಅಪ್ನಾ ರಾಹುಲ್ (ನಿಮ್ಮ ಸ್ವಂತ ರಾಹುಲ್)’ ಎಂದು ಸಹಿ ಹಾಕಲಾಗಿದೆ. ಈ ಪತ್ರವನ್ನು ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲಾಗಿದ್ದು, ಭಾರತ್ ಜೋಡೋ ಯಾತ್ರೆಯಿಂದ ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ.
ರಾಹುಲ್ ಗಾಂಧಿಯವರು ತಮ್ಮ ಪತ್ರದಲ್ಲಿ ಎಲ್ಲ ವಿಷಯಗಳನ್ನು ಮುಟ್ಟಲು ಪ್ರಯತ್ನಿಸಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಲಕ್ಷಾಂತರ ಭಾರತೀಯರು ತಮ್ಮೊಂದಿಗೆ ನಡೆದ ಐತಿಹಾಸಿಕ, 3,500 ಕಿಮೀ ಉದ್ದದ ಭಾರತ್ ಜೋಡೋ ಯಾತ್ರೆಯನ್ನು ಪೂರ್ಣಗೊಳಿಸಿದ ನಂತರ ಇದನ್ನು ಬರೆಯಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಇದು ನನ್ನ ಜೀವನದ ಅತ್ಯಂತ ಶ್ರೀಮಂತ ಪ್ರಯಾಣವಾಗಿತ್ತು ಮತ್ತು ಪ್ರತಿಯೊಬ್ಬ ಭಾರತೀಯನು ನಮ್ಮ ಮೇಲೆ ತೋರಿದ ಪ್ರೀತಿಗೆ ನಾನು ಚಿರಋಣಿ. ದಾರಿಯುದ್ದಕ್ಕೂ ನಿಮ್ಮ ಎಲ್ಲಾ ಕಥೆಗಳನ್ನು ನಾನು ಗಮನವಿಟ್ಟು ಕೇಳಿದ್ದೇನೆ. ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತಿದೆ ಯುವಜನರಲ್ಲಿ ನಿರುದ್ಯೋಗ, ಅಸಹನೀಯ ಬೆಲೆ ಏರಿಕೆ, ತೀವ್ರ ಕೃಷಿ ಸಂಕಟ ಮತ್ತು ಜನರು ತಮ್ಮ ಉದ್ಯೋಗ ಕಳೆದುಕೊಳ್ಳುವ ಬಗ್ಗೆ ಚಿಂತಿತರಾಗಿದ್ದಾರೆ. ಅವರ ಆದಾಯವು ಮತ್ತಷ್ಟು ಕುಸಿಯುತ್ತಿದೆ ಮತ್ತು ಅವರ ಕನಸುಗಳು, ಉತ್ತಮ ಭವಿಷ್ಯವು ಛಿದ್ರವಾಗುತ್ತಿದೆ. ಈ ಅನಿಷ್ಟಗಳನ್ನು ನಿರ್ಮೂಲನೆ ಮಾಡಲು ಬೀದಿಗಿಳಿದು ಸಂಸತ್ತಿನವರೆಗೆ ಪ್ರತಿ ದಿನವೂ ಹೋರಾಡುತ್ತೇನೆ ಮತ್ತು ಪ್ರತಿಯೊಬ್ಬರಿಗೂ ಆರ್ಥಿಕ ಸಮೃದ್ಧಿಯನ್ನು ಸೃಷ್ಟಿಸಲು ಸಂಕಲ್ಪ ಮಾಡುತ್ತೇನೆ’ ಎಂದಿದ್ದಾರೆ.




