ಮಂಗಳೂರು: ಬೈಕಿನಲ್ಲಿ ತೆರಳುತ್ತಿದ್ದವರ ಮೇಲೆ ಹಲ್ಲೆ
ಮಂಗಳೂರು: ಸುರತ್ಕಲ್ ನಲ್ಲಿ ಯುವಕನೊಬ್ಬ ತನ್ನ ಗೆಳತಿಯನ್ನು ಬೈಕಿನಲ್ಲಿ ಆಕೆಯ ಅಪಾರ್ಟ್ಮೆಂಟ್ ಗೆ ಬಿಡಲು ಹೋಗಿದ್ದ ಸಂದರ್ಭದಲ್ಲಿ ಆರು ಜನರ ತಂಡ ಅಡ್ಡಗಟ್ಟಿ ಇಬ್ಬರಿಗೂ ಹಲ್ಲೆ ನಡೆಸಿದ ಘಟನೆ ಸಂಭವಿಸಿದೆ.
ಹಿಂದು ಸಂಘಟನೆಯ ಕಾರ್ಯಕರ್ತರು ಎನ್ನಲಾದ ಆರು ಮಂದಿ ಅನ್ಯಕೋಮಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ್ದಾರೆ. ಮೊಹಮ್ಮದ್ ಯಾಸೀನ್ ಮತ್ತು ಆತನ ಸ್ನೇಹಿತೆ ಆನ್ಸಿ ವಿನ್ನಿ ಡಯಾಸ್ ಹಲ್ಲೆಗೀಡಾದವರು. ಇವರು ಮುಕ್ಕದ ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು ಸಂಜೆಯ ವಿಹಾರ ಮುಗಿಸಿ ರಾತ್ರಿ ಹತ್ತು ಗಂಟೆ ವೇಳೆಗೆ ಹುಡುಗಿಯನ್ನು ಬೈಕಿನಲ್ಲಿ ಇಡ್ಯಾದ ಕಲ್ಯಾಣಿ ಪರ್ಲ್ ಅಪಾರ್ಟ್ ಮೆಂಟಿಗೆ ಬಿಡಲು ತೆರಳುತ್ತಿದ್ದ.
ಬೈಕ್ ಅಪಾರ್ಟ್ಮೆಂಟ್ ತಲುಪುತ್ತಿದ್ದಂತೆ ತಡೆದು ನಿಲ್ಲಿಸಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ ನಿಮ್ಮ ಹೆಸರೇನೆಂದು ಕೇಳಿ ಕೈಯಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಯುವತಿಯನ್ನು ಕೈಯಲ್ಲಿ ಹಿಡಿದು ನೆಲಕ್ಕೆ ದೂಡಿ ಹಾಕಿದ್ದು ನಿನಗೆ ಬ್ಯಾರಿಯೇ ಆಗಬೇಕಾ ಎಂದು ಪ್ರಶ್ನಿಸಿ ನಿಂದಿಸಿದ್ದಾರೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡು ತಿಂಗಳ ಹಿಂದೆ ಸುರತ್ಕಲ್ ಪೇಟೆಯಲ್ಲಿ ಇದೇ ರೀತಿ ಬೊಲೆರೋ ಜೀಪಿನಲ್ಲಿ ಮಲ್ಪೆ ಬೀಚ್ ಗೆ ತೆರಳಿ ಹಿಂತಿರುಗುತ್ತಿದ್ದ ವಿದ್ಯಾರ್ಥಿ – ವಿದ್ಯಾರ್ಥಿನಿಯರಿದ್ದ ತಂಡದ ಮೇಲೆ ಹಿಂದು ಸಂಘಟನೆಯ ಯುವಕರು ದಾಳಿ ನಡೆಸಿದ್ದರು. ಪೊಲೀಸ್ ಅಧಿಕಾರಿಯ ಮುಂದೆಯೇ ಘಟನೆ ನಡೆದಿತ್ತು. ಇದೀಗ ಸುರತ್ಕಲ್ ಠಾಣೆ ವ್ಯಾಪ್ತಿಯಲ್ಲೇ ಮತ್ತೊಂದು ಕೃತ್ಯ ನಡೆದಿದೆ. ಹಿಂದು ಹುಡುಗಿ ಎಂದು ನಂಬಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ.