April 12, 2025

ಬಂಟ್ವಾಳ: ಜಿಲ್ಲೆಯಲ್ಲಿ ನಡೆಯುತ್ತಿರುವ ಒಂದೊಂದು ಕೊಲೆಯೂ ಬಿಜೆಪಿಯ ಚುನಾವಣಾ ಪೂರ್ವ ತಯಾರಿ: ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ

0

ಬಂಟ್ವಾಳ: ಸಾಮಾನ್ಯವಾಗಿ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಮೂಲಕ ಮತ ಸೆಳೆಯುವ ಪ್ರಯತ್ನ ಮಾಡುತ್ತವೆ. ಆದರೆ ಬಿಜೆಪಿ ಮತ್ತು ಆರ್.ಎಸ್.ಎಸ್ ರಕ್ತ ಅಮಾಯಕರ ಹೆಣ ಬೀಳಿಸುವ ಮೂಲಕ ಚುನಾವಣೆಗೆ ಪೂರ್ವ ತಯಾರಿ ನಡೆಸುತ್ತವೆ. ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಒಂದೊಂದು ಕೊಲೆಯು ಕೂಡ ಬಿಜೆಪಿಯ ಚುನಾವಣಾ ಪೂರ್ವ ತಯಾರಿ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಪರಂಗಿಪೇಟೆ ಆರೋಪಿಸಿದ್ದಾರೆ.

ಸೂರತ್ಕಲ್ ನಲ್ಲಿ ನಡೆದ ಜಲೀಲ್ ಎಂಬ ಯುವಕನ ಕೊಲೆಯನ್ನು ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದ ಅವರು, ಚುನಾವಣೆ ಸಮೀಪಿಸುತ್ತಿದ್ದಂತೆ ಅಮಾಯಕ ಅಲ್ಪಸಂಖ್ಯಾತರು ಮತ್ತು ದಲಿತರ ಮೇಲೆ ಹಲ್ಲೆ ಮಾಡುವ ಪ್ರಯತ್ನವನ್ನು ಸಂಘಪರಿವಾರ ಮಾಡುತ್ತದೆ. ಅದು ಫಲ ನೀಡಲಿಲ್ಲವಾದರೆ ಅಮಾಯಕ ಮುಸ್ಲಿಮರನ್ನು, ದಲಿತರನ್ನು ಕೊಲ್ಲುವ ಮೂಲಕ ಅದರಿಂದ ರಾಜಕೀಯ ಲಾಭ ಪಡೆಯುವ ನೀಚ ಕೃತ್ಯಕ್ಕೆ ಮುಂದಾಗುತ್ತದೆ. ಅದರಿಂದಲೂ ತಕ್ಕ ಪ್ರತಿಫಲ ಸಿಗದೇ ಹೋದ ಸಂದರ್ಭದಲ್ಲಿ ಅವರದೇ ಸಂಘಟನೆಯ ವ್ಯಕ್ತಿಯನ್ನು ಅಥವಾ ಅಮಾಯಕ ಹಿಂದುಗಳನ್ನು ಕೊಲ್ಲುವ ಮೂಲಕ ತಮ್ಮ ರಾಜಕೀಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವಂತಹ ಕೃತ್ಯಕ್ಕೆ ಬಿಜೆಪಿ ಮತ್ತು ಸಂಘ ಪರಿವಾರ ಪ್ರಯತ್ನಿಸುತ್ತದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಕರ್ನಾಟಕಕ್ಕೆ ಉಗ್ರ ಭಾಷಣಕಾರರಾದ ಉಗ್ರವಾದದ ಆರೋಪದ ಅಡಿಯಲ್ಲಿ ಬೇಲ್ ಮೇಲೆ ಇರುವ ಇರುವಂತಹ ಪ್ರಜ್ಞಾಸಿಂಗ್ ಅಂತವರನ್ನು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಂತವರನ್ನು ಕರೆತಂದು ಇಲ್ಲಿನ ಯುವಕರನ್ನು ಪ್ರಚೋದಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಆ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕರ್ನಾಟಕವನ್ನು ಉತ್ತರ ಪ್ರದೇಶ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ರಿಯಾಝ್ ಅವರು ಆರೋಪಿಸಿದರು.

 

 

ಜನರ ಹಿತ, ಜೀವ ಮತ್ತು ಸಂಪತ್ತನ್ನು ಕಾಪಾಡಲು ಎಸ್‌ಡಿಪಿಐ ಪಕ್ಷ ಜಾತಿ, ಧರ್ಮ ಭೇದವಿಲ್ಲದೆ ಅನ್ಯಾಯದ ವಿರುದ್ಧ ನಿರಂತರವಾಗಿ ಹೋರಾಡುತ್ತಲೇ ಇರುತ್ತದೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ರಿಯಾಜ್ ಕಡಂಬುರವರು, ಮುಖ್ಯಮಂತ್ರಿಗಳ ಕ್ರಿಯೆಗೆ ಪ್ರತಿಕ್ರಿಯೆ ಅನ್ನುವ ಮಾತನ್ನೇ ಪಾಲಿಸುವುದಾದರೆ ಈಗ ನಾವು ಎರಡು ಜೀವಗಳನ್ನು ಪಡೆಯಬೇಕು. ಆದರೆ ನಾವು ಅಂತಹ ನೀಚತನಕ್ಕೆ ಇಳಿಯುವುದಿಲ್ಲ ಎಂದು ಹೇಳಿದರು. ದಕ್ಷಿಣ ಕನ್ನಡದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇಲ್ಲಿಯವರೆಗೆ ಎಂಟು ಜೀವಗಳು ಬಲಿಯಾಗಿವೆ. ಸಿಎಎ/ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆಯಲ್ಲಿ ಜಲೀಲ್ ಮತ್ತು ನೌಶಿನ್ ಗೋಲಿಬಾರ್ ನಲ್ಲಿ ಕೊಲೆಯಾದ ನಂತರ ದಿನೇಶ್ ಎಂಬ ದಲಿತ ಯುವಕನನ್ನು ಸಂಘ ಪರಿವಾರದ ಗೂಂಡಾ ನಾಯಕ ಥಳಿಸಿ ಕೊಲೆ ಮಾಡುತ್ತಾನೆ. ಆನಂತರ ಅಮಾಯಕ ಮಸೂದ್ ಕೊಲೆಯಾಗುತ್ತದೆ. ಮುಂದುವರಿದು ಹಿಂದುತ್ವ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆಯೂ ಆಗುತ್ತದೆ. ಇದಾದ ನಂತರ ಫಾಸಿಲ್ ಕೊಲೆಯೂ ನಡೆಯುತ್ತದೆ. ಈಗ ಅಮಾಯಕ ಜಲೀಲ್ ಕೊಲೆ ನಡೆದಿದೆ. ಅವರ ಕಾರ್ಯಕರ್ತ ಎನ್ನುವ ಕಾರಣಕ್ಕೆ ಪ್ರವೀಣ್ ನೆಟ್ಟಾರುಗೆ ಮಾತ್ರ ಲಕ್ಷಾಂತರ ರೂಪಾಯಿ ಪರಿಹಾರವನ್ನು ಸರ್ಕಾರ ಒದಗಿಸುತ್ತದೆ ಮತ್ತು ಆ ಕೊಲೆಯ ತನಿಖೆಯ ನೆಪದಲ್ಲಿ ನೂರಾರು ಅಮಾಯಕ ಮುಸ್ಲಿಂ ಯುವಕರನ್ನು ಬಂಧಿಸಲಾಗುತ್ತದೆ ಮತ್ತು ಹಿಂಸಿಸಲಾಗುತ್ತದೆ. ಆದರೆ ಉಳಿದವರ ವಿಚಾರವಾಗಿ ಸಂಪೂರ್ಣ ನಿರ್ಲಕ್ಷ್ಯ ತೋರುತ್ತದೆ ಎಂದು ಅವರು ಆರೋಪಿಸಿದರು.

ಈ ಕೊಲೆಗಳ ಹಿಂದೆ ರಾಜಕೀಯ ಉದ್ದೇಶವಿರುವುದು ಸ್ಪಷ್ಟ. ಇಲ್ಲಿನ ಬಿಜೆಪಿ ಶಾಸಕರು ಮುಸ್ಲಿಮರಿಗೆ ಏನೂ ಮಾಡಿಲ್ಲ ಎನ್ನುವ ಚರ್ಚೆಗಳು ನಡೆಯುವ ಸಂದರ್ಭದಲ್ಲಿ ಈ ಕೊಲೆಗಳು ನಡೆದಿವೆ. ಹಾಗಾಗಿ ಇದರ ಹಿಂದೆ ಬಿಜೆಪಿಯ ಕೈವಾಡವೆ ಇದೆ ಎಂಬುದು ನಮ್ಮ ಅನುಮಾನ ಎಂದು ರಿಯಾಝ್ ಕಡಂಬು ಹೇಳಿದರು.

ಸಂಘ ಪರಿವಾರದ ಇಂತಹ ಹಿಂಸಾತ್ಮಕ ಕೃತ್ಯಗಳ ವಿರುದ್ಧ ಹೋರಾಡುವ, ಪ್ರತಿರೋಧ ತೋರುವ ಶಕ್ತಿ ನಮ್ಮಲ್ಲಿ ಇದೆ. ಮುಸ್ಲಿಮರು, ದಲಿತರು ಒಟ್ಟಾಗಿ ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ಹೋರಾಟಕ್ಕೆ ಇಳಿದರೆ ಇಲ್ಲಿನ ವ್ಯವಸ್ಥೆ ಸಂಪೂರ್ಣವಾಗಿ ಕುಸಿಯುತ್ತದೆ ಎಂದು ಪೊಲೀಸ್ ಕಮಿಷನರ್ ಗೆ ಎಚ್ಚರಿಕೆಯನ್ನು ಈ ಸಂದರ್ಭದಲ್ಲಿ ಅವರು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಂಟ್ವಾಳ ಕ್ಷೇತ್ರದ ಪಕ್ಷದ ಉಸ್ತುವಾರಿಯಾದ ಎಸ್.ಎಚ್. ಶಾಹುಲ್ ಹಮೀದ್ ಅವರು ಈ ಕೊಲೆಗಳು ಚುನಾವಣೆಯ ಸಂದರ್ಭದಲ್ಲಿ ಸಂಘ ಪರಿವಾರದ ಮತ್ತು ಬಿಜೆಪಿಯ ತಂತ್ರ ಎಂದು ಆರೋಪಿಸಿದರು. ಕ್ರಿಯೆಗೆ ಪ್ರತಿಕ್ರಿಯೆಗೆ ನಾವು ಹೋಗುವುದಿಲ್ಲ ಎಂದ ಅವರು ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಈ ಅಮಾಯಕರ ಕೊಲೆಗಳ ವಿರುದ್ಧ ವಿರೋಧ ಪಕ್ಷಗಳು ಮೌನವಾಗಿರುವುದರ ಬಗ್ಗೆ ಆಕ್ರೋಶ ಹೊರ ಹಾಕಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ರಾಜ್ಯ ಸಮಿತಿ ಸದಸ್ಯ ಅಕ್ಬರ್ ಅಲಿ ಪೊನ್ನೋಡಿ ಅವರು ಬಿಜೆಪಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಹಿಂಸಾ ಕೃತ್ಯಗಳಿಗೆ ಸುಪಾರಿ ಕಾರ್ಖಾನೆಯ ರೀತಿಯಲ್ಲಿ ಕೆಲಸ ಮಾಡುತ್ತಿದೆ ಇಂತಹ ಶಾಂತಿ ಕದಡುವ ಸಂಘಪರಿವಾರದ ಕೃತ್ಯಗಳ ವಿರುದ್ಧ ಎಸ್‌ಡಿಪಿಐ ಪಕ್ಷ ಬಹಿರಂಗ ಹೋರಾಟ ಮಾಡಲಿದೆ ಎಂದು ಹೇಳಿದರು. ಸಂಘಪರಿವಾರವನ್ನು ತೋರಿಸಿ ಮುಸ್ಲಿಮರ ವೋಟನ್ನು ಪಡೆಯುವ ಕಾಂಗ್ರೆಸ್ ಅಧಿಕಾರ ದೊರೆತ ನಂತರ ಸಂಘಪರಿವಾರವನ್ನು ಎದುರಿಸುವ ಕಾರ್ಯ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಈ ಪ್ರತಿಭಟನೆಯ ಅಧ್ಯಕ್ಷತೆಯನ್ನು ವಹಿಸಿದ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಮೂನಿಷ್ ಆಲಿ, ವೇದಿಕೆಯಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಯೂಸುಫ್ ಆಲಡ್ಕ ಮತ್ತು ಖಾದರ್ ಫರಂಗಿಪೇಟೆ, ಕ್ಷೇತ್ರ ಸಮಿತಿ ಕಾರ್ಯದರ್ಶಿ ಕಲಂದರ್ ಪರ್ತಿಪ್ಪಾಡಿ, ಉಪಾಧ್ಯಕ್ಷರಾದ ಅನ್ವರ್ ಬಡಕಬೈಲು, ಜೊತೆ ಕಾರ್ಯದರ್ಶಿಗಳಾದ ಅಶ್ರಫ್ ತಲಪಾಡಿ ಹಾಗು ಮುಬಾರಕ್ ಗೂಡಿನ ಬಳಿ ಮತ್ತು ಪುರಸಭಾ ಸಮಿತಿ ಅಧ್ಯಕ್ಷರಾದ ಶರೀಫ್ ವಲವೂರು ಹಾಗೂ ಪಕ್ಷದ ಇನ್ನಿತರ ನಾಯಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!