December 19, 2025

ಶರಣ್ ಪಂಪ್ವೆಲ್ ಗೆ ಮುಸ್ಲಿಮರ ದುಡ್ಡು ಆಗುತ್ತದೆ, ಮುಸ್ಲಿಮರ ಜೊತೆಗೆ ವ್ಯವಹಾರ ನಡೆಸಲಿಕ್ಕೆ ಆಗುತ್ತೆ: ದೀಪು ಶೆಟ್ಟಿಗಾರ್

0
IMG-20211115-WA0007.jpg

ಮಂಗಳೂರು: ಮಂಗಳೂರಿನಲ್ಲಿ ನಡೆದ ಹಲ್ಲೆ ಕೃತ್ಯದ ನೆಪದಲ್ಲಿ ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ವೆಲ್, ಬಿರುವೆರ್ ಕುಡ್ಲ ಸಂಘಟನೆಯ ಹೆಸರೆತ್ತಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಸಂಘಟನೆಯ ಮುಖಂಡರು ಸುದ್ದಿಗೋಷ್ಠಿ ಕರೆದು ಶರಣ್ ಪಂಪ್ವೆಲ್ ಬಗ್ಗೆ ತೀವ್ರ ಪ್ರಶ್ನೆಗಳನ್ನು ಎತ್ತಿದ್ದಾರೆ.

ಶರಣ್ ಪಂಪ್ವೆಲ್ ಪ್ರತಿ ಬಾರಿ ಮುಸ್ಲಿಂ, ಮುಸ್ಲಿಂ ಎಂದು ಹೇಳುತ್ತಾರೆ. ಇವರಿಗೆ ಮುಸ್ಲಿಮರ ದುಡ್ಡು ಆಗುತ್ತದೆ. ಮುಸ್ಲಿಮರ ಜೊತೆಗೆ ವ್ಯವಹಾರ ನಡೆಸಲಿಕ್ಕೆ ಆಗುತ್ತದೆ. ಸಿಟಿ ಸೆಂಟರಲ್ಲಿ ಮೆಂಟೆನೇನ್ಸ್ ಹೆಸರಲ್ಲಿ ಎಷ್ಟು ಹಣದ ವ್ಯವಹಾರ ಇಟ್ಟುಕೊಂಡಿಲ್ಲ. ನಮ್ಮ ಸಂಘಟನೆ ಯಾವುದೇ ಜಾತಿಗೆ ಸೀಮಿತ ಆಗಿಲ್ಲ. ಎಲ್ಲ ಮತೀಯರು, ಜಾತಿಯವರೂ ನಮ್ಮ ಜೊತೆ ಇದ್ದಾರೆ. ಮುಸ್ಲಿಮರೂ ಇದ್ದಾರೆ. ಮುಸ್ಲಿಂ ಅಂದ ಕೂಡಲೇ ಕೆಟ್ಟವರು ಅನ್ನುವುದು ತಪ್ಪು. ನಮ್ಮ ಪ್ರಧಾನಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುತ್ತಾರೆ. ಇವರದೇ ಸಂಘಟನೆಯ ವ್ಯಕ್ತಿಯಾಗಿ ಇವರು ಮುಸ್ಲಿಮರನ್ನು ನಿಂದಿಸುವುದು ಎಷ್ಟು ಸರಿ ಎಂದು ದೀಪು ಶೆಟ್ಟಿಗಾರ್
ಪ್ರಶ್ನೆ ಮಾಡಿದರು.

ನಿಮಗೆ ಮುಸ್ಲಿಮರ ಹಣ ಆಗುತ್ತದೆ, ರಾಜಕೀಯ ಕಾರಣಕ್ಕಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದೀರಾ.. ನೀವು ನಮ್ಮ ಸಂಘಟನೆಗೆ ಕಾರ್ಯಕರ್ತರು ಸಿಗಲಿಕ್ಕಿಲ್ಲ ಎನ್ನುತ್ತೀರಿ. ನಮ್ಮ ಸಂಘಟನೆಗೆ ಯಾರನ್ನೂ ನೀವು ಬನ್ನಿ ಎಂದು ಸೇರಿಸಿಕೊಂಡಿಲ್ಲ. ಅವರಾಗೇ ಬಂದಿದ್ದಾರೆ. ರಾಜ್ಯ, ಮುಂಬೈ, ದುಬೈ ಸೇರಿ 27 ಘಟಕಗಳಿದ್ದು, ನಾರಾಯಣ ಗುರು ಧ್ಯೇಯದಂತೆ ಒಂದೇ ಮತ, ಒಂದೇ ಜಾತಿ ಅನ್ನುವ ದೃಷ್ಟಿ ಇರಿಸಿ ಕೆಲಸ ಮಾಡುತ್ತೇವೆ. 20 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು, ಸದಸ್ಯರು ಇದ್ದಾರೆ. ನಿಮ್ಮ ಒಳ್ಳೆಯ ಕೆಲಸದ ಬಗ್ಗೆ ಅಭಿಮಾನ ಇದೆ, ಹಾಗೆಂದು ನೀವು ನಮಗೆ ಧರ್ಮದ ಹೆಸರಲ್ಲಿ ಪಾಠ ಹೇಳಿಕೊಡುವ ಅಗತ್ಯವಿಲ್ಲ. ನಿಮ್ಮ ವೈಯಕ್ತಿಕ ವಿಚಾರಗಳನ್ನೆಲ್ಲ ನಾವು ಮುಂದಿಟ್ಟರೆ ನಿಮ್ಮ ಜೊತೆಗೇ ಕಾರ್ಯಕರ್ತರು ಬರಲಿಕ್ಕಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ. ಅದಕ್ಕೆ ಆಸ್ಪದ ಕೊಡಬೇಡಿ ಎಂದು ದೀಪು ಶೆಟ್ಟಿಗಾರ್ ಹೇಳಿದರು.

ಬಳ್ಳಾಲ್ ಬಾಗ್ ಪರಿಸರದಲ್ಲಿ ಕುಡಿದು, ಕೆಟ್ಟ ಚಟುವಟಿಕೆಗಳಲ್ಲಿ ತೊಡಗಿಸುವುದು, ಮಹಿಳೆಯರಿಗೆ ಚುಡಾಯಿಸುವ ಕೆಲಸ ನಡೆಯುತ್ತಿದೆ. ಈ ಬಗ್ಗೆ ಅಲ್ಲಿನ ನಿವಾಸಿಗಳು ಬರ್ಕೆ ಠಾಣೆಗೆ ಎರಡು ಬಾರಿ ದೂರು ಕೊಟ್ಟಿದ್ದಾರೆ. ಈ ಬಗ್ಗೆ ನಿಮ್ಮ ಗಮನಕ್ಕೆ ಬಂದಿಲ್ಲವೇ.. ಈಗ ಅದೇ ಪ್ರದೇಶದಲ್ಲಿ ನಿಂತು ಪ್ರತಿಭಟನೆ ನಡೆಸುತ್ತಿದ್ದೀರಿ. ಕೋಮು ಪ್ರಚೋದನೆ ಮಾಡುತ್ತಿದ್ದೀರಿ. ಅದಕ್ಕೆ ನಮ್ಮ ಹೆಸರನ್ನು ಎಳೆದು ತಂದಿದ್ದೀರಿ. ನೀವು ಈ ಬಗ್ಗೆ ಬಹಿರಂಗ ಕ್ಷಮೆ ಯಾಚಿಸದಿದ್ದರೆ ನಾವು ಕಾನೂನು ಕ್ರಮ ಕೈಗೊಳ್ಳಲಿದ್ದೇವೆ. ಜೊತೆಗೆ, ನಿಮ್ಮ ಖಾಸಗಿ ವಹಿವಾಟಿನ ಬಗ್ಗೆ ಪುರಾವೆ ಸಹಿತ ಮುಂದಿಡಲಿದ್ದೇವೆ ಎಂದು ಸಂಘಟನೆಯ ರಾಕೇಶ್ ಪೂಜಾರಿ ಹೇಳಿದರು.

ನಾವು ಏಳು ವರ್ಷಗಳಿಂದ ಸಾಮಾಜಿಕ ಕೆಲಸ ಮಾಡುತ್ತಿದ್ದೇವೆ. 3.5 ಕೋಟಿ ರೂಪಾಯಿ ವೆಚ್ಚದ ವಿವಿಧ ಸಮಾಜ ಪರ ಕೆಲಸಗಳನ್ನು ಮಾಡಿದ್ದೇವೆ. ನಮ್ಮ ಸಂಘಟನೆ ಈಗ ಸಮಾಜದ ಎಲ್ಲ ಸ್ತರಗಳಲ್ಲಿ ಹರಡಿಕೊಂಡಿದೆ. ಬೇರೆ ಬೇರೆ ಸಂಘಟನೆಗಳಲ್ಲಿ ಇರುವವರು ನಮ್ಮ ಜೊತೆಗಿದ್ದಾರೆ ಎಂದು ಲಕ್ಷ್ಮೀಶ ಸುವರ್ಣ ಹೇಳಿದರು.

ಬಿರುವೆರ್ ಕುಡ್ಲ ಸಂಘಟನೆಯ ಜಿಲ್ಲಾ ವಕ್ತಾರ ಲಕ್ಷ್ಮೀಶ ಸುವರ್ಣ, ಎಲ್ಲಿ ಕೆಲವರ ವೈಯಕ್ತಿಕ ದ್ವೇಷದಿಂದ ಹಲ್ಲೆ ಕೃತ್ಯ ಆಗಿತ್ತು. ಮೇಲಾಗಿ ಆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಲವರನ್ನು ಬಂಧಿಸಿದ್ದಾರೆ. ಇದರ ಮಧ್ಯೆ, ಶರಣ್ ಪಂಪ್ವೆಲ್ ನಮ್ಮ ಸಂಘಟನೆಯ ಹೆಸರೆತ್ತಿ ದೇಶದ್ರೋಹಿಗಳ ಜೊತೆ ಸಂಬಂಧ ಇರಿಸಿಕೊಂಡಿದ್ದೇವೆ ಎಂದು ಆಪಾದನೆ ಮಾಡಿದ್ದಾರೆ. ಇವರಿಗೆ ಈ ರೀತಿ ಆರೋಪ ಮಾಡಲಿಕ್ಕೆ ಎಷ್ಟು ಧೈರ್ಯ. ಇವರೇನು ದೂರದಲ್ಲಿರುವ ವ್ಯಕ್ತಿಯೇನಲ್ಲ. ನಮ್ಮ ಜೊತೆ ಹತ್ತಿರದ ಸಂಬಂಧ ಹೊಂದಿದ್ದಾರೆ. ನಮ್ಮೆಲ್ಲರ ಪರಿಚಯವೂ ಇದೆ. ಇವರಿಗೆ ಒಂದು ಕರೆ ಮಾಡಿ ಕೇಳಬಹುದಿತ್ತು. ಆದರೆ, ಅದೇನೂ ಮಾಡದೆ ಬಳ್ಳಾಲ್ ಬಾಗ್ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿ, ನಮ್ಮ ಸಂಘಟನೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಪ್ರಕರಣದಲ್ಲಿ ಬಂಧಿಸಲ್ಪಟ್ಟ ವ್ಯಕ್ತಿಗಳು ನಮ್ಮ ಸಂಘಟನೆಯ ಸದಸ್ಯರಲ್ಲ. ಇರ್ಫಾನ್ ಅಥವಾ ಅವರು ಯಾರನ್ನು ಉಲ್ಲೇಖ ಮಾಡಿದ್ದಾರೋ ಅವರು ನಮ್ಮ ಸಂಘಟನೆಯವರಲ್ಲ. ಹಾಗಿದ್ದರೂ, ಇದರ ಬಗ್ಗೆ ಖಚಿತಪಡಿಸಿಕೊಳ್ಳದೆ ಈಗ ಬಳ್ಳಾಲ್ ಬಾಗ್ ಫ್ರೆಂಡ್ಸ್ ಸಂಘಟನೆಯ ರಕ್ಷಿತ್ ಕೊಟ್ಟಾರಿ ತನ್ನ ಸಂಬಂಧಿಕ ಎಂಬ ಒಂದೇ ಕಾರಣಕ್ಕೆ ಅವರ ಮಾತುಕೇಳಿ ಶರಣ್ ಪಂಪ್ವೆಲ್ ಹೊರಗೆ ನಿಂತು ಏನೇನೋ ಹೇಳಿದ್ದಾರೆ. ನಮ್ಮ ಸಂಘಟನೆಯ ಬಗ್ಗೆ ಈ ಬಗ್ಗೆ ಶರಣ್ ಪಂಪ್ವೆಲ್ ಬಹಿರಂಗ ಕ್ಷಮೆ ಯಾಚಿಸದಿದ್ದರೆ ಮಾನನಷ್ಟ ಮೊಕದ್ದೆಮೆ ಹೂಡಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬಿರುವೆರ್ ಕುಡ್ಲ ಸಂಘಟನೆಯ ಸ್ಥಾಪಕ ಸದಸ್ಯ ಉದಯ ಪೂಜಾರಿ, ರಾಕೇಶ್ ಸಾಲ್ಯಾನ್ ಸೇರಿದಂತೆ 25ಕ್ಕೂ ಹೆಚ್ಚು ವಿವಿಧ ಘಟಕಗಳ ಸದಸ್ಯರು ಸುದ್ದಿಗೋಷ್ಟಿಯಲ್ಲಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!