ಮೇಸ್ತ್ರಿ ಕೆಲಸಕ್ಕೆಂದು ಬಸ್ಸಿನಲ್ಲಿ ಹೋಗುತ್ತಿದ್ದಾಗ ಮುಸ್ಲಿಮ್ ವ್ಯಕ್ತಿಗೆ ಹಲ್ಲೆ: ಬಸ್ ಕಂಡೆಕ್ಟರ್ ಸೇರಿದಂತೆ ಸಂಘಪರಿವಾರದ ಕಾರ್ಯಕರ್ತರಿಂದ ಕೃತ್ಯ
ಮಂಗಳೂರು: ಬಸ್ಸಿನಲ್ಲಿ ಹೋಗುತ್ತಿದ್ದಾಗ ಮುಸ್ಲಿಮ್ ವ್ಯಕ್ತಿಯೊಬ್ಬರಿಗೆ ಬಸ್ ಕಂಡೆಕ್ಟರ್ ಸೇರಿದಂತೆ ಸಂಘಪರಿವಾರದ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬಂಟ್ವಾಳ ತಾಲೂಕಿನ ರಾಯಿ ಎಂಬಲ್ಲಿ ನಡೆದಿದೆ.
ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಮುಲ್ಲರಪಟ್ನ ನಿವಾಸಿ ಇಸಾಕ್ (45) ಎಂದು ಗುರುತಿಸಲಾಗಿದೆ.
ಮೇಸ್ತ್ರಿ ಕೆಲಸ ಮಾಡುತ್ತಿರುವ ಇಸಾಕ್ ಅವರು ಬುಧವಾರ ಬೆಳಗ್ಗೆ ಬಿ.ಸಿ.ರೋಡ್’ನಿಂದ ಮೂಡಬಿದ್ರೆಗೆ ಹೋಗಲು ‘ಮಹಾ ಗಣೇಶ’ ಎಂಬ ಖಾಸಗಿ ಬಸ್ ಹತ್ತಿದ್ದಾರೆ. ಸ್ವಲ್ಪ ದೂರ ಹೋದ ಬಳಿಕ ವಿದ್ಯಾರ್ಥಿಗಳು, ಇತರ ಪ್ರಯಾಣಿಕರು ಬಸ್ ಹತ್ತಿದ್ದರಿಂದ ವಿಪರೀತ ಪ್ರಯಾಣಿಕ ದಟ್ಟಣೆ ಉಂಟಾಗಿದೆ. ಇಸಾಕ್ ಅವರು ಕುಳಿತಿದ್ದ ಸೀಟಿನ ಬಳಿ ನಿಂತಿದ್ದ ಮಹಿಳೆಯೊಬ್ಬರು ಬ್ಯಾಗ್ ಹಿಡಿದುಕೊಳ್ಳುವಂತೆ ಇಸಾಕ್ ಅವರಿಗೆ ನೀಡಿದ್ದಾರೆ. ಅವರ ಮನವಿಯಂತೆ ಇಸಾಕ್ ಬ್ಯಾಗ್ ತೆಗೆದುಕೊಂಡಿದ್ದು, ಮಹಿಳೆ ತಾನು ಇಳಿಯುವ ಜಾಗ ತಲುಪಿದಾಗ ಇಸಾಕ್ ಅವರಿಂದ ಬ್ಯಾಗ್ ಪಡೆದು ಬಸ್ ‘ನಿಂದ ಇಳಿದಿದ್ದಾರೆ ಎನ್ನಲಾಗಿದೆ.
ಇದಾದ ಸ್ವಲ್ಪ ಹೊತ್ತಿನಲ್ಲೇ ಬಸ್ ಕಂಡೆಕ್ಟರ್, ಇಸಾಕ್ ಅವರ ಬಳಿ ಬಂದು ತಗಾದೆ ತೆಗೆದು, ನೀವು ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ್ದೀರಿ, ಮಹಿಳೆಯ ಮೈ ಮುಟ್ಟಿದ್ದೀರಿ ಎಂದು ಸುಳ್ಳು ಆರೋಪ ಮಾಡಿದ್ದಾನೆ. ಮಾತ್ರವಲ್ಲ ಬಸ್ ನಿಲ್ಲಿಸಿ ಇಸಾಕ್ ಅವರನ್ನು ಕೆಳಗಿಳಿಸಿ ಹಲ್ಲೆ ನಡೆಸಿದ್ದಾನೆ. ಈ ಮಧ್ಯೆ ಕೆಲವರಿಗೆ ಮೊಬೈಲ್ ನಲ್ಲಿ ಕರೆ ಮಾಡಿ ಕೆಲವು ಯುವಕರನ್ನು ಅಲ್ಲಿಗೆ ಕರೆಸಿಕೊಂಡಿದ್ದಾನೆ. ಆ ಗುಂಪಿಗೆ ಇಸಾಕ್ ಅವರನ್ನು ಹಸ್ತಾಂತರಿಸಿ ಬಸ್ ಕಂಡೆಕ್ಟರ್ ಬಸ್’ನೊಂದಿಗೆ ತೆರಳಿದ್ದಾನೆ ಎಂದು ತಿಳಿದುಬಂದಿದೆ.




