ಬಂಗಾಳ ಕೊಲ್ಲಿಯಲ್ಲಿ ‘ಮ್ಯಾಂಡಸ್’ ಚಂಡಮಾರುತ: ದ.ಕ. ಜಿಲ್ಲೆ ಸೇರಿದಂತೆ ವಿವಿಧೆಡೆ ಮಳೆ– ಚಳಿ ತೀವ್ರ, ತಂಪಾದ ಗಾಳಿ
ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ‘ಮ್ಯಾಂಡಸ್’ ಚಂಡಮಾರುತದ ಮಳೆ– ಚಳಿಯ ತೀವ್ರತೆ ರಾಜಧಾನಿ ಬೆಂಗಳೂರಿಗೂ ತಟ್ಟಿದೆ. ನಗರದಲ್ಲಿ ಶನಿವಾರ ದಿನವಿಡೀ ಮಳೆ ಸುರಿಯಿತು. ಕೆಲವು ಬಡಾವಣೆಗಳಲ್ಲಿ ಮಳೆ ಬಿರುಸಾಗಿ ಸುರಿದರೆ, ಕೆಲವು ಕಡೆ ಜಿಟಿಜಿಟಿಯಾಗಿ ಬಂದಿತು.
ಭಾನುವಾರ ಸಹ ನಗರದಲ್ಲಿ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.
ಕೊರೆಯುವ ಚಳಿಯಿಂದ ವೃದ್ಧರಿಗೆ ಮನೆಯಿಂದ ಹೊರಬರಲು ಸಾಧ್ಯವಾಗಲಿಲ್ಲ. ದಿನವಿಡೀ ಸೂರ್ಯನ ದರ್ಶನವಾಗಲಿಲ್ಲ. ಅಕಾಲಿಕ ಮಳೆಯು ಮಳೆಗಾಲ ನೆನಪಿಸಿತು.
ಮಲ್ಲೇಶ್ವರ, ಬ್ಯಾಟರಾಯನಪುರ, ಪೀಣ್ಯಕೈಗಾರಿಕಾ ಪ್ರದೇಶ, ಜಾಲಹಳ್ಳಿ, ಯಲಹಂಕ, ಕೆಂಗೇರಿ, ಕೆಂಗೇರಿ ಉಪನಗರ, ರಾಜಾಜಿನಗರ, ಹೆಬ್ಬಾಳ, ಸದಾಶಿವನಗರ, ವಿಜಯನಗರ, ರಾಜರಾಜೇಶ್ವರಿ ನಗರ, ಟಿ.ದಾಸರಹಳ್ಳಿ, ಸುಂಕದಕಟ್ಟೆ, ಯಶವಂತಪುರ, ಹೆಗ್ಗನಹಳ್ಳಿ, ಹೆಬ್ಬಾಳ, ರಾಜಗೋಪಾಲನಗರ, ಶ್ರೀರಾಮಪುರ, ಸುಬ್ರಹ್ಮಣ್ಯ ನಗರ, ಚಂದ್ರಲೇಔಟ್, ಕಲಾಸಿಪಾಳ್ಯ, ಚಾಮರಾಜಪೇಟೆ, ಉಪ್ಪಾರಪೇಟೆ, ಜೆ.ಜೆ.ನಗರ, ಮಾಗಡಿ ರಸ್ತೆ, ವಿಜಯನಗರ, ಕೋರಮಂಗಲದಲ್ಲಿ ಇಡೀ ದಿನ ಮಳೆಯಾಗಿದೆ. ಮಳೆ ಹಾಗೂ ಚಳಿಯಿಂದ ನಗರದ ಜನರು ತೊಂದರೆ ಅನುಭವಿಸಿದರು. ವಾರಾಂತ್ಯದಲ್ಲಿ ಖರೀದಿಗೆ ಮನೆಯಿಂದ ಹೊರಬಂದವರು ಕೊಡೆಯ ರಕ್ಷಣೆ ಪಡೆದು ಸಾಗಿದರು.
ಚಳಿಯಿಂದ ರಕ್ಷಣೆ ಪಡೆಯಲು ಜನರು ಬಿಸಿ ಜೋಳ, ಬಿಸಿಯಾದ ಕಾಫಿ ಮೊರೆಹೋದರು. ಕೆಲಸ
ಮುಗಿಸಿ ದ್ವಿಚಕ್ರ ವಾಹನಗಳಲ್ಲಿ ಮನೆಗೆ ತೆರಳುವವರು ಪರದಾಡಿದರು.




