ಶಿವಮೊಗ್ಗ: ಕಾರು–ಲಾರಿ ನಡುವೆ ಅಪಘಾತ, ಮೂವರು ಸಾವು, ಓರ್ವ ಗಂಭೀರ
ಶಿವಮೊಗ್ಗ: ತಾಲ್ಲೂಕಿನ ಕಲ್ಲಾಪುರ ಬಳಿ ಭಾನುವಾರ ಬೆಳಿಗ್ಗೆ ಕಾರು–ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಶಿವಮೊಗ್ಗ ಹೊರವಲಯದ ಅಬ್ಬಲಗೆರೆ ಸಮೀಪದ ಕಲ್ಲಾಪುರ ಬಳಿ ಗೂಡ್ಸ್ ಲಾರಿ ಹಾಗೂ ಬಲೆನೊ ಕಾರು ನಡುವೆ ಡಿಕ್ಕಿ ಸಂಭವಿಸಿದೆ.
ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಸಾವಿಗೀಡಾಗಿದ್ದಾರೆ. ಮೃತರನ್ನು ಕಾರು ಚಾಲನೆ ಮಾಡುತ್ತಿದ್ದ ಕಾರ್ತಿಕ್ (21), ವಿವೇಕ್ (21) ಹಾಗೂ ಮೋಹನ (21) ಎಂದು ಗುರುತಿಸಲಾಗಿದೆ. ರುದ್ರೇಶ್ ಪಾಟೀಲ ಎಂಬುವವರ ಸ್ಥಿತಿ ಗಂಭೀರವಾಗಿದೆ. ಗಾಯಾಳುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ದಾವಣಗೆರೆಯವರು. ಅಲ್ಲಿನ ಬಿಐಇಟಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು. ಶಿವಮೊಗ್ಗಕ್ಕೆ ಬಂದವರು ವಾಪಸ್ ದಾವಣಗೆರೆಗೆ ಹೊರಟಿದ್ದರು ಎಂದು ತಿಳಿದುಬಂದಿದೆ.
ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಅಭಯ್ ಪ್ರಕಾಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.




