ಬೇಕರಿಗೆ ನುಗ್ಗಿ ಕೆಲಸಗಾರರಿಬ್ಬರ ಮೇಲೆ ಹಲ್ಲೆ: ಆರು ಮಂದಿಯ ವಿರುದ್ಧ ಎಫ್‌ಐಆರ್ ದಾಖಲು
ಬೆಂಗಳೂರು: ಎಚ್‌ಎಎಲ್ ಠಾಣೆ ವ್ಯಾಪ್ತಿಯ ಕುಂದಲಹಳ್ಳಿಯಲ್ಲಿರುವ ಬೇಕರಿಯೊಂದನ್ನು ನುಗ್ಗಿ ಕೆಲಸಗಾರರಿಬ್ಬರ ಮೇಲೆ ಹಲ್ಲೆ ಮಾಡಲಾಗಿದ್ದು, ಕೃತ್ಯ ಎಸಗಿರುವ ಆರು ದುಷ್ಕರ್ಮಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
‘ಡಿ. 8ರಂದು ರಾತ್ರಿ ನಡೆದಿರುವ ಘಟನೆಯಲ್ಲಿ ಗಾಯಗೊಂಡಿರುವ ಇಬ್ಬರು ಕೆಲಸಗಾರರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಬೇಕರಿಯಲ್ಲಿದ್ದ ಇಬ್ಬರು ಕೆಲಸಗಾರರು, ವ್ಯಾಪಾರದಲ್ಲಿ ನಿರತರಾಗಿದ್ದ ವೇಳೆ ಬೇಕರಿಗೆ ಬಂದಿದ್ದ ದುಷ್ಕರ್ಮಿಗಳ ತಂಡ, ಸಿಗರೇಟ್ ವಿಚಾರವಾಗಿ ಜಗಳ ತೆಗೆದಿತ್ತು. ಕೆಲಸಗಾರರ ಮೇಲೆ ದಾಳಿ ಮಾಡಿದ್ದ ದುಷ್ಕರ್ಮಿಗಳು, ಬೇಕರಿಯಲ್ಲೆಲ್ಲ ಅಟ್ಟಾಡಿಸಿ ಹೊಡೆದಿದ್ದರು. ಜಗಳ ಬಿಡಿಸಲು ಬಂದ ಯುವಕನ ಮೇಲೆ ಹಲ್ಲೆ ಮಾಡಿದ್ದರು. ಬೇಕರಿಯಲ್ಲಿದ್ದ ವಸ್ತುಗಳನ್ನು ಚಿಲ್ಲಾಪಿಲ್ಲಿಯಾಗಿಸಿದ್ದರು. ಆರೋಪಿಗಳ ಕೃತ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ’
ಬೇಕರಿ ಕೆಲಸಗಾರರ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನು ಬಂಧಿಸಬೇಕು’ ಎಂದು ಒತ್ತಾಯಿಸಿ ಎಚ್‌ಎಎಲ್ ಠಾಣೆ ಎದುರು ಬೇಕರಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿದ್ದಾರೆ.




