September 20, 2024

ಮಂಗಳೂರು: ಕುಡುಕನಿಗೆ ಬಿದ್ದು ಸಿಕ್ಕಿದ 10 ಲ.ರೂ ಹಣದ ಬಂಡಲ್ – ಮುಂದೆನಾಯ್ತು ಗೊತ್ತಾ? ಇಲ್ಲಿದೆ ಅಸಲಿ ಕಥೆ

0

ಮಂಗಳೂರು: ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಕಂಕನಾಡಿ ಠಾಣಾ ವ್ಯಾಪ್ತಿಯಲ್ಲಿ ಅಂದಾಜು 10 ಲಕ್ಷ ರೂಪಾಯಿ ಮೌಲ್ಯದ ಹಣದ ಬಂಡಲ್ ಒಂದು ಬೀದಿಯಲ್ಲಿ ಸಿಕ್ಕಿ ಕುಡುಕನೊಬ್ಬನ ಕೈ ಸೇರಿದ, ಅರ್ಧ ಗಂಟೆಯ ಬಳಿಕ ಅದು ಪೊಲೀಸರ ಕೈ ಸೇರಿದ ಅದಾಗಿ ಒಂದು ವಾರ ಕಳೆದರೂ ಠಾಣೆಯಲ್ಲಿ ಪ್ರಕರಣವೂ ದಾಖಲಾಗದೆ, ವಾಪಾಸ್ಸು ಕುಡುಕನ ಕೈಗೂ ಸೇರದೆ ನಿಗೂಢತೆ ಸೃಷ್ಟಿಸಿರುವ ಘಟನೆಯೊಂದು ನಡೆದಿದೆ.

ನ.27ರಂದು ಪಂಪ್ವೆಲ್ ಮೇಲೇತುವೆ ಸಮೀಪದ ವೈನ್ಶಾಪ್ ಸಮೀಪದ ಬಾರ್ ವೊಂದರ ಬೈಕ್ ಗಳ ಪಾರ್ಕಿಂಗ್ ಸ್ಥಳದಲ್ಲಿ ಹಣ ಇರುವ ಚೀಲ ಸಿಕ್ಕಿದೆ ಎಂದು ತಮಿಳುನಾಡು ಮೂಲದ ಕನ್ಯಾಕುಮಾರಿ ಶಿವರಾಜ್ ಎಂಬಾತ ಮಾಧ್ಯಮಗಳಿಗೆ ತಿಳಿಸಿದ್ದಾನೆ. ಅದಾದ ಅರ್ಧ ಗಂಟೆಯ ಬಳಿಕ ಈ ಬಗ್ಗೆ ಮಾಹಿತಿ ಪಡೆದ ಪೊಲೀಸರಿಬ್ಬರು ಶಿವರಾಜ್ ಹಾಗೂ ಆ ಹಣದ ಥೈಲಿಯನ್ನು ಠಾಣೆಗೆ ಹಿಡಿದುಕೊಂಡು ಹೋಗಿದ್ದಾರೆ , ಮೂರು ದಿನಗಳ ಬಳಿಕ ಹಣವನ್ನು ಇರಿಸಿಕೊಂಡು ಶಿವರಾಜ್ ನನ್ನು ವಾಪಸ್ಸು ಕಳುಹಿಸಿದ್ದಾರೆ ಎಂದು ಆರೋಪ ವ್ಯಕ್ತವಾಗಿದೆ.

ಘಟನೆ ವಿವರ…

ಮೂಲತ: ತಮಿಳುನಾಡಿನವನಾಗಿರುವ ಕನ್ಯಾಕುಮಾರಿ ಶಿವರಾಜ್ (49) ಮಂಗಳೂರಿನಲ್ಲಿ ಮೆಕ್ಯಾನಿಕ್ ಆಗಿದ್ದು, ಬೋಂದೆಲ್‌ನ ಕೃಷ್ಣನಗರದಲ್ಲಿ ಆತನ ಮನೆ, ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಮಗಳು ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ. ವಿಪರೀತ ಕುಡಿತದ ಚಟ ಬೆಳೆಸಿಕೊಂಡಿರುವ ಶಿವರಾಜ್ ಮನೆಗೂ ಹೋಗುತ್ತಿಲ್ಲ ಎನ್ನಲಾಗಿದೆ.

ನ.27ರಂದು ಪಂಪ್ವೆಲ್ ಮೇಲೇತುವೆ ಸಮೀಪದ ವೈನ್ಶಾಪ್‌‌ಗೆ ಹೋದ ಶಿವರಾಜ್ ಮದ್ಯ ಸೇವಿಸಿ ಬೀಡಿ ಸೇದುತ್ತಾ ನಿಂತಿದ್ದರು. ಅಲ್ಲಿನ ಬೈಕ್ ಗಳ ಪಾರ್ಕಿಂಗ್ ಸ್ಥಳದಲ್ಲಿ ಒಂದು ಚೀಲ ಬಿದ್ದಿತ್ತು. ಅಲ್ಲೇ ಇದ್ದ ಕೂಲಿ ಕಾರ್ಮಿಕ ಚೀಲವನ್ನೂ ಹಾಗೂ ಶಿವರಾಜ್ನನ್ನೂ ದಿಟ್ಟಿಸುತ್ತಿದ್ದ. ಏನು ನೋಡುತ್ತಿದ್ದಿಯಾ ಎಂದು ಕೇಳಿದಾಗ, ಆ ಚೀಲ ತೋರಿಸಿ, ಏನೋ ಇದೆ ಎಂದು ಉತ್ತರಿಸಿದ. ಮೆಲ್ಲಗೆ ಚೀಲ ತೆರೆದಾಗ ಅಚ್ಚುಕಟ್ಟಾಗಿ ಕಟ್ಟಿದ್ದ ಬಂಡಲ್ ಇತ್ತು. ಕವರ್ ಹರಿದಾಗ, 500 ರೂ. ನೋಟುಗಳಿರುವ ಬಂಡಲ್ ಕಂಡು ಇಬ್ಬರೂ ಹೌಹಾರಿದರು.

ಚೀಲ ಎತ್ತಿಕೊಂಡು ಎರಡು ನೋಟು ಹೊರಗೆ ತೆಗೆದು, ಮತ್ತೆ ಅದೇ ವೈನ್ ಶಾಪ್ ಗೆ ಹೋಗಿ ಇಬ್ಬರೂ ಕುಡಿದು, ಹೊರಗೆ ಬಂದು ಉಳ್ಳಾಲ ಕಡೆಯ ಸರ್ವಿಸ್ ರಸ್ತೆಯಲ್ಲಿ ಅರ್ಧ ಕಿ.ಮೀ. ನಡೆದುಕೊಂಡು ಹೋದರು. ‘ನನಗೇನೂ ಕೊಡುವುದಿಲ್ಲವೇ’ ? ಎಂದುಕೂಲಿ ಕಾರ್ಮಿಕ ಕೇಳಿದಾಗ, 500 ಮತ್ತು 2000 ರೂ. ಮುಖಬೆಲೆಯ ಒಂದು ಬಂಡಲ್ ಆತನಿಗೆ ಕೊಡಲಾಯಿತು.ಮೂರು ಬಂಡಲ್ ಸೊಂಟದ ಮಧ್ಯೆ ಸಿಕ್ಕಿಸಿದರೆ, ಎರಡು ನೋಟು ತೆಗೆದಿದ್ದ ಬಂಡಲ್ ಅಂಗಿಯ ಕಿಸೆಯಲ್ಲಿ ಹಾಕಿದ್ದ ಶಿವರಾಜ್ಗೆ ಅಲ್ಲಿ ನಿಲ್ಲಲಾಗಲಿಲ್ಲ. ಆತ ಮತ್ತೆ ಅದೇ ವೈನ್ಶಾಪ್ಗೆ ಬಂದ.

ಹೊಟ್ಟೆ ತುಂಬಿಸಿಕೊಂಡ. ಹೊರಗೆ ಬರುವಷ್ಟರಲ್ಲಿ ಯಾರೋ ಕೊಟ್ಟ ಮಾಹಿತಿಯಂತೆ ಗಸ್ತು ನಿರತ ಪೊಲೀಸರು ಆತನನ್ನು ಕರೆದು ಕೊಂಡು ಹೋದರು. ಕುಡಿದ ನಶೆ ಇಳಿಯುವಾಗ ರಾತ್ರಿಯಾಗಿತ್ತು. ಪೊಲೀಸರು ದುಡ್ಡಿನ ಬಗ್ಗೆ ಕೇಳಿದಾಗ,ದಾರಿಯಲ್ಲಿ ಸಿಕ್ಕಿದ್ದು ಎಂದು ಉತ್ತರಿಸಿದ್ದು,ಒಂದು ಬಂಡಲ್ ಒಬ್ಬಾತನಿಗೆ ಕೊಟ್ಟಿರುವ ಬಗ್ಗೆಯೂ ತಿಳಿಸಿದರು.

ಪೊಲೀಸರು ಮರುದಿನ ಶಿವರಾಜ್ ನೊಂದಿಗೆ ಬಂದು ಆ ಕೂಲಿ ಕಾರ್ಮಿನನ್ನು ಹುಡುಕಾಡಿದರೂ ಸಿಗಲಿಲ್ಲ. ಆ ಹಣ ಈಗ ಕಂಕನಾಡಿ ನಗರ ಪೊಲೀಸ್ ಠಾಣೆ ಯಲ್ಲಿದೆ. ಈ ಬಗ್ಗೆ ಕೇಸ್ ದಾಖಲಾಗಿಲ್ಲ. ಒಂದು ಬಂಡಲ್ ಕೊಂಡು ಹೋದ ವ್ಯಕ್ತಿಯನ್ನು ಕರೆದುಕೊಂಡು ಬಂದರೆ, ಹಣ ಕೊಡುತ್ತೇವೆ ಎಂದು ಪೊಲೀಸರು ಒತ್ತಡ ಹಾಕುತ್ತಿದ್ದಾರೆ. ಏನು ಮಾಡ ಬೇಕೆಂದು ತೋಚುತ್ತಿಲ್ಲ ಎಂದು ಶಿವರಾಜ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!