ನಿರಂತರ ಮಳೆಯಿಂದ ಗೋಡೆ ಕುಸಿದು ದಂಪತಿಗಳು ಜೀವಂತ ಸಮಾಧಿ
ಚಿತ್ರದುರ್ಗ: ಕಳೆದ ಮೂರು ದಿನಗಳಿಂದಲೂ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆಯ ಗೋಡೆ ಕುಸಿದು (Wall Collapse) ಮಲಗಿದ್ದ ದಂಪತಿ ಜೀವಂತ ( Couple dies ) ಸಮಾಧಿ ಯಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕಾರೋಬನಹಟ್ಟಿಯಲ್ಲಿ ನಡೆದಿದೆ.
ಹಿರಿಯೂರು ತಾಲೂಕಿನ ಕಾರೋಬನಹಟ್ಟಿಯ ನಿವಾಸಿ ಚೆನ್ನಕೇಶವ, ಸೌಮ್ಯ ಮೃತ ದಂಪತಿಗಳಾಗಿದ್ದಾರೆ. ಇನ್ನು ಘಟನೆಯಲ್ಲಿ ಚೆನ್ನಕೇಶವ ಅವರ ತಂದೆ ಕ್ಯಾತಣ್ಣ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಕ್ಯಾತಣ್ಣ ಅವರನ್ನು ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.
ಗಾಯಗೊಂಡಿರುವ ಕ್ಯಾತಣ್ಣ ಅವರ ಇಬ್ಬರು ಮಕ್ಕಳ ಪೈಕಿ ಚಿಕ್ಕ ಮಗ ಚೆನ್ನಕೇಶವ ಮನೆಯ ಪಕ್ಕದಲ್ಲಿಯೇ ಗುಡಿಸಲು ಕಟ್ಟಿಕೊಂಡು ಪತ್ನಿ ಸೌಮ್ಯ ಜೊತೆಯಲ್ಲಿ ಜೀವನ ಸಾಗಿಸುತ್ತಿದ್ದ. ಆದರೆ ಭಾನುವಾರ ಬೆಳಗಿನ ಜಾವದಲ್ಲಿ ಮನೆಯ ಗೋಡೆ ಒಮ್ಮಿಂದೊಮ್ಮೆಲೆ ಕುಸಿದು ದುರಂತ ಸಂಭವಿಸಿದೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಐಮಂಗಲ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸುತ್ತಿದ್ದಾರೆ.





