ಶಾಲಾ ಮಕ್ಕಳ ಬ್ಯಾಗ್‌ನಲ್ಲಿ ಕಾಂಡೋಮ್, ಗರ್ಭ ನಿರೋಧಕ ಮಾತ್ರೆಗಳು ಪತ್ತೆ!
ಬೆಂಗಳೂರು: ಶಾಲಾ ವಿದ್ಯಾರ್ಥಿಗಳ ಬ್ಯಾಗ್‌ನಲ್ಲಿ ಕಾಂಡೋಮ್‌ಗಳು, ಲೈಟರ್, ಸಿಗರೇಟ್‌ಗಳು, ವೈಟ್‌ನರ್‌ಗಳು ಮತ್ತು ಗರ್ಭನಿರೋಧಕ ಮಾತ್ರೆ(ಐ-ಪಿಲ್), ನೀರಿನ ಬಾಟಲಿಗಳಲ್ಲಿ ಆಲ್ಕೋಹಾಲ್ ಇರುವುದೂ ಪತ್ತೆಯಾಗಿರುವ ಆಘಾತಕಾರಿ ಸಂಗತಿ ಹೊರಬಿದ್ದಿದೆ.
ಮಕ್ಕಳ ಏಕಾಗ್ರತೆ ಮತ್ತು ಕಲಿಕೆಗೆ ಸ್ಮಾರ್ಟ್ಫೋನ್ಗಳಿಂದ ಭಂಗ ಬರುತ್ತಿದೆ. ಇದೇ ಕಾರಣಕ್ಕೆ ಶಾಲೆಗಳಿಗೆ ಸ್ಮಾರ್ಟ್ಫೋನ್ ತರುವಂತಿಲ್ಲ ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿರುವ ಹಲವು ಶಾಲೆಗಳು ವಿದ್ಯಾರ್ಥಿಗಳು ಮಕ್ಕಳ ಬ್ಯಾಗ್ಗಳನ್ನು ತಪಾಸಣೆಗೆ ಒಳಪಡಿಸುತ್ತಿವೆ.
ಈ ವೇಳೆ ಕೆಲ ಮಕ್ಕಳ ಬ್ಯಾಗ್ಗಳಲ್ಲಿ ಸೆಲ್ಫೋನ್ಗಳು, ಸ್ಮಾರ್ಟ್ಫೋನ್ಗಳು, ಜೊತೆಗೆ ಕಾಂಡೋಮ್ಗಳು, ಗರ್ಭನಿರೋಧಕ ಮಾತ್ರೆಗಳು, ಲೈಟರ್ಗಳು, ಸಿಗರೇಟ್ಗಳು, ಮತ್ತೇರಿಸುವ ವಾಸನೆ ಹೊಂದಿರುವ ವೈಟ್ನರ್ಗಳು ಮತ್ತು ಹೆಚ್ಚಿನ ಮೊತ್ತದ ನಗದು ಪತ್ತೆಯಾಗಿವೆ. ಈ ಬೆಳವಣಿಗೆಯು ಹಲವು ಶಾಲೆಗಳ ಬೋಧಕ ಸಿಬ್ಬಂದಿಯಲ್ಲಿ ಆಘಾತ ಉಂಟು ಮಾಡಿದೆ. ‘ಮಕ್ಕಳು ದಾರಿ ತಪ್ಪುತ್ತಿದ್ದಾರೆಯೇ? ಇಂಥ ಮಕ್ಕಳನ್ನು ನಿಭಾಯಿಸುವುದು ಹೇಗೆ’ ಎಂಬ ಗೊಂದಲ ಅವರನ್ನು ಕಾಡುತ್ತಿದೆ.
ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಪರಿಶೀಲಿಸುವಂತೆ ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕಾಮ್ಸ್) ಕೂಡ ತನ್ನ ಸದಸ್ಯ ಶಾಲೆಗಳಿಗೆ ಸೂಚಿಸಿತ್ತು. ಕೆಲವು ಶಾಲೆಗಳು ಪೋಷಕ- ಶಿಕ್ಷಕರ ವಿಶೇಷ ಸಭೆಗಳನ್ನು ನಡೆಸುತ್ತಿವೆ.





