ಉಡುಪಿ: ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ
ಉಡುಪಿ: ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ಕಾರಣಕ್ಕೆ ಕಾಲೇಜಿನ ಫ್ರಿನ್ಸಿಪಾಲ್ ಬೈದು ಅವಮಾನಿಸಿದರೆಂಬ ಕಾರಣಕ್ಕೆ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಪೆರ್ಡೂರಿನಲ್ಲಿ ನಡೆದಿದೆ.
ಪೆರ್ಡೂರು ನಿವಾಸಿ ಸುರೇಶ್ ಮೆಂಡನ್ ಪುತ್ರಿ ತೃಪ್ತಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿ.
ಈಕೆ ಖಾಸಗಿ ಸಂಸ್ಥೆಯಲ್ಲೇ ಪ್ರೌಢಶಿಕ್ಷಣ ಪಡೆದು ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಹಿನ್ನೆಲೆ ಪಿಯುಸಿ (ವಿಜ್ಞಾನ ವಿಭಾಗ) ವಿದ್ಯಾಭ್ಯಾಸಕ್ಕೆ ಕಾಲೇಜಿನಲ್ಲಿ ಫ್ರೀ ಸೀಟ್ ಪಡೆದಿದ್ದರು.
ಈ ಬಾರಿಯ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ಕಾರಣ ಆಡಳಿತ ಮಂಡಳಿ ತೃಪ್ತಿಯನ್ನು ಬೈದಿದ್ದಾರೆ, ಮತ್ತು ಫೈನ್ ಹಾಗೂ ಸಂಪೂರ್ಣ ಫೀಸ್ ಕಟ್ಟಬೇಕೆಂದಿದ್ದಾರೆ ಎಂದು ಕಳೆದ ಮೂರು ದಿನಗಳ ಹಿಂದೆ ತೃಪ್ತಿ ತಂದೆಯ ಬಳಿ ಹೇಳಿಕೊಂಡಿದ್ದರು.
ಆದರೆ ಇದರಿಂದಾಗಿ ಮಾನಸಿಕವಾಗಿ ನೊಂದ ತೃಪ್ತಿ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ವಿದ್ಯಾರ್ಥಿನಿಯ ತಂದೆ ಸುರೇಶ್ ಮೆಂಡನ್ ಅವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ





