November 22, 2024

ಸುಳ್ಯ: ಸ್ವತಃ ನ್ಯಾಯಾಧೀಶರುಗಳೇ ಸಾರ್ವಜನಿಕರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ, ಜನರಿಗೆ ಬೇಕಾದ ವಿವಿಧ ಸರಕಾರಿ ಸೌಲಭ್ಯಗಳ ದಾಖಲೆಗಳಿಗೆ ಸಹಾಯ

0

ಸುಳ್ಯ: ತಾಲೂಕು ಕಚೇರಿ ಸಭಾಂಗಣದಲ್ಲಿ ಕಾನೂನು ಪ್ರಾಧಿಕಾರದ ವತಿಯಿಂದ ಕಾನೂನು ಅರಿವು ಕಾರ್ಯಕ್ರಮದ ಅಂಗವಾಗಿ ನಡೆದ ಒಂದೇ ಸೂರಿನಡಿಯಲ್ಲಿ ಸರಕಾರಿ ಸೌಲಭ್ಯಗಳ ಯೋಜನೆ ಜನರಿಗೆ ಮುಟ್ಟಿಸುವ ಕಾರ್ಯದ ಮೇಘಾ ಕಾರ್ಯಕ್ರಮ ಇಂದು ಸುಳ್ಯ ತಾಲ್ಲೂಕು ಕಛೇರಿ ವರಾಂಡದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಸುಳ್ಯ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಸೋಮಶೇಖರ್, ಹಾಗೂ ಕಿರಿಯ ನ್ಯಾಯಾಧೀಶ ಯಶವಂತ್ ಕುಮಾರ್ ಇಂದಿನ ಕಾರ್ಯಕ್ರಮದ ಕುರಿತ ಮಹತ್ವವನ್ನು ವಿವರಿಸಿದರು. ಕಳೆದ 45 ದಿನಗಳಿಂದ ನಿರಂತರವಾಗಿ ನಡೆಯುತ್ತಾ ಬಂದಿರುವ ಕಾನೂನು ಅರಿವು ಕಾರ್ಯಕ್ರಮದಲ್ಲಿ ಕೇವಲ ಕಾನೂನಿನ ಬಗ್ಗೆ ಮಾತ್ರ ಮಾಹಿತಿ ನೀಡಲಾಗಿತ್ತು. ಆದರೆ ಇಂದು ನಡೆಯುತ್ತಿರುವ ಕಾರ್ಯಕ್ರಮ ವಿಭಿನ್ನವಾಗಿದ್ದು ಸರಕಾರಿ ಸೌಲಭ್ಯಗಳು ಜನರಿಗೆ ಮುಟ್ಟಿಸುವಲ್ಲಿ ಕಾನೂನು ಪ್ರಾಧಿಕಾರದ ಈ ಸೇವೆ ಉತ್ತಮವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ, ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೃದ್ಧಾಪ್ಯ ವೇತನ, ಕೋವಿಡ್ ಲಸಿಕೆ, ಆಯುಷ್ಮಾನ್ ಕಾರ್ಡ್ ಯೋಜನೆ ಮುಂತಾದ ಸೌಲಭ್ಯಗಳ ಕೌಂಟರ್ ಗಳನ್ನು ತೆರೆದು ಫಲಾನುಭವಿಗಳಿಗೆ ಇದರ ಪ್ರಯೋಜನ ಲಭ್ಯವಾಗುವಂತೆ ನಡೆಸಲಾಯಿತು.
ಈ ಕಾರ್ಯಕ್ರಮದ ಪೂರ್ಣ ಸಹಕಾರ ಸುಳ್ಯ ತಾಲೂಕು ಆಡಳಿತ ವತಿಯಿಂದ ನೀಡಿದ್ದು ನ್ಯಾಯಾಧೀಶರೊಂದಿಗೆ ತಹಸಿಲ್ದಾರ್ ಕುಮಾರಿ ಅನಿತಾಲಕ್ಷ್ಮಿ ಸಂಪೂರ್ಣ ಸಹಕಾರ ನೀಡಿದರು.
ಈ ಮೇಘ ಕಾರ್ಯಕ್ರಮದಲ್ಲಿ ಸುಳ್ಯ ವಕೀಲರ ಸಂಘ,ತಾಲೂಕು ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಗರ ಪಂಚಾಯತ್ ಸುಳ್ಯ,ಸುದ್ದಿ ಸಮೂಹ ಸಂಸ್ಥೆ ಸುಳ್ಯ, ಹಾಗೂ ವಿವಿಧ ಇಲಾಖೆಗಳು ಭಾಗವಹಿಸಿದವು.ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ತಹಸಿಲ್ದಾರ್ ಕುಮಾರಿ ಅನಿತಾಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಎ ಪಿ ಪಿ ಜನಾರ್ಧನ್ ಬಿ ಶಿಕ್ಷಣಾಧಿಕಾರಿ ಎಸ್ ಪಿ ಮಹದೇವ, ಸುಳ್ಯ ತಾಲೂಕು ಆರೋಗ್ಯ ಅಧಿಕಾರಿ ಡಾ.ನಂದಕುಮಾರ್, ಶಿಶು ಕಲ್ಯಾಣ ಅಧಿಕಾರಿ ರಶ್ಮಿ,ವೃತ್ತ ನಿರೀಕ್ಷಕ ನವೀನಚಂದ್ರ ಜೋಗಿ, ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ, ಪುತ್ತೂರು ವಿಭಾಗದ ಆರ್ಟಿಓ ಅಧಿಕಾರಿ ಮೊದಲಾದವರು ಉಪಸ್ಥಿತರಿದ್ದರು. ಉಪತಹಸೀಲ್ದಾರ್ ಚಂದ್ರಕಾಂತ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಮಹಿಳಾಮತ್ತುಮಕ್ಕಳಅಭಿವೃದ್ಧಿಇಲಾಖೆ ಅಧಿಕಾರಿ ರಶ್ಮಿ ವಂದಿಸಿದರು.

ಕಾರ್ಯಕ್ರಮದಲ್ಲಿ ನೂರಾರು ಮಂದಿ ಫಲಾನುಭವಿಗಳು ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು.
ನ್ಯಾಯಾಧೀಶರುಗಳೇ ಸ್ವತಹ ಸಾರ್ವಜನಿಕರೊಂದಿಗೆ ಸೇರಿ ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡದ್ದು, ಜನರ ಸಮಸ್ಯೆಗೆ ಸ್ಪಂದಿಸುತ್ತಾ ವಿವಿಧ ಸೌಲಭ್ಯಗಳ ಕೌಂಟರ್ ಗಳಿಗೆ ಜನರನ್ನು ಕಳುಹಿಸುತ್ತಿದ್ದ ದೃಶ್ಯ ಸಾರ್ವಜನಿಕರಲ್ಲಿ ಪ್ರಶಂಸೆಗೆ ಕಾರಣವಾಯಿತು. ಸರಕಾರಿ ಇಲಾಖೆಗಳಲ್ಲಿ ಪ್ರತಿನಿತ್ಯ ಇದೇ ರೀತಿಯ ಸೇವೆ ಸಾರ್ವಜನಿಕರಿಗೆ ಸಿಗಲಿ ಎಂದು ಫಲಾನುಭವಿಗಳು ಮಾತನಾಡಿಕೊಳ್ಳುತ್ತಿದ್ದರು.

Leave a Reply

Your email address will not be published. Required fields are marked *

error: Content is protected !!