February 4, 2026

ಮಂಗಳೂರು: ಎಸ್ ಡಿ ಪಿ ಐ ಕಚೇರಿ ಜಪ್ತಿ ಪ್ರಕರಣ: ಪೊಲೀಸ್ ಕಮಿಷನರ್ ಗೆ ಹೈಕೋರ್ಟ್ ನೋಟಿಸ್

0
image_editor_output_image1260809018-1669211127189

ಬೆಂಗಳೂರು: ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾಗೆ (ಎಸ್’ಡಿಪಿಐ) ಸೇರಿದ ಸ್ಥಳಗಳಲ್ಲಿ ಅಕ್ರಮವಾಗಿ ದಾಳಿ ನಡೆಸಿ, ಪಕ್ಷಕ್ಕೆ ಸೇರಿದ ಆಸ್ತಿಗಳನ್ನು ಜಪ್ತಿ ಮಾಡಿರುವುದಲ್ಲದೇ ಕಚೇರಿಗಳನ್ನು ವಶಕ್ಕೆ ತೆಗೆದುಕೊಂಡಿರುವುದನ್ನು ತೆರವುಗೊಳಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ನಿರ್ದೇಶಿಸಲು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿರುವ ಕರ್ನಾಟಕ ಹೈಕೋರ್ಟ್‌ ಬುಧವಾರ ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿದೆ.

ಎಸ್‌ಡಿಪಿಐನ ದಕ್ಷಿಣ ಕನ್ನಡ ಪ್ರಧಾನ ಕಾರ್ಯದರ್ಶಿ ಅನ್ವರ್‌ ಸಾದತ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ, ಪೊಲೀಸ್‌ ಆಯುಕ್ತರು ಮತ್ತು ಪೊಲೀಸ್‌ ವರಿಷ್ಠಾಧಿಕಾರಿಗೆ ನೋಟಿಸ್‌ ಜಾರಿ ಮಾಡಿದ್ದು, ವಿಚಾರಣೆಯನ್ನು ಡಿಸೆಂಬರ್‌ 6ಕ್ಕೆ ಮುಂದೂಡಿದೆ.

ಪ್ರಜಾಪ್ರತಿನಿಧಿ ಕಾಯಿದೆ 1951ರ ಅಡಿ ಎಸ್’ಡಿಪಿಐ ನೋಂದಾಯಿತ ರಾಜಕೀಯ ಪಕ್ಷವಾಗಿದ್ದು, ತುಳಿತಕ್ಕೊಳಗಾದ ಸಮುದಾಯಗಳ ಪರವಾಗಿ ಕೆಲಸ ಮಾಡುತ್ತಿರುವುದರಿಂದ ವಿಭಜನಕಾರಿ ಶಕ್ತಿಗಳ ಕೆಂಗಣ್ಣಿಗೆ ಗುರಿಯಾಗಿದ್ದೇವೆ. ಇದರಿಂದ ಅರ್ಜಿದಾರರ ವಿರುದ್ಧ ಕೆಟ್ಟ ಅಭಿಪ್ರಾಯ ಮೂಡಿಸಲು ಸರ್ಕಾರಿ ಸಂಸ್ಥೆಗಳ ಮೇಲೆ ಒತ್ತಡ ಹಾಕಲಾಗುತ್ತಿದ್ದು, ನಮ್ಮ ಕೆಲಸಕ್ಕೆ ಅಡ್ಡಿಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ಎಸ್’ಡಿಪಿಐ ಮನವಿಯಲ್ಲಿ ಆಕ್ಷೇಪಿಸಲಾಗಿದೆ.

ಸ್ವತಂತ್ರ ಸಂಸ್ಥೆಯಾಗಿರುವುದರಿಂದ ಅರ್ಜಿದಾರ ಪಕ್ಷವನ್ನು ನಿಷೇಧ ಮಾಡಲಾಗಿಲ್ಲ. ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್’ಐ) ಜೊತೆ ಎಸ್’ಡಿಪಿಐ ಯಾವುದೇ ಸಂಪರ್ಕ ಹೊಂದಿಲ್ಲ. ಪಿಎಫ್’ಐ ಮತ್ತು ಅದರ ಸಂಸ್ಥೆಗಳನ್ನು ನಿಷೇಧಿಸುವ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವಾಲಯವು ಎಸ್’ಡಿಪಿಐ ಹೆಸರು ಸೇರಿಸಿಲ್ಲ. ಆದಾಗ್ಯೂ, ಸರ್ಕಾರಿ ಅಧಿಕಾರಿಗಳು/ಪ್ರತಿವಾದಿಗಳು, ಎಸ್’ಡಿಪಿಐಗೆ ಸೇರಿದ ಸ್ಥಳಗಳಲ್ಲಿ ಅಕ್ರಮವಾಗಿ ದಾಳಿ ನಡೆಸಿ, ಜಪ್ತಿ ಮಾಡಿದ್ದಾರೆ. ಎಸ್’ಡಿಪಿಐಗೆ ಸೇರಿದ ಕಚೇರಿಗಳನ್ನು ಮುಚ್ಚಿರುವುದನ್ನು ತೆರವು ಮಾಡುವಂತೆ ಪ್ರತಿವಾದಿಗಳಿಗೆ ಎಸ್’ಡಿಪಿಐ 2022ರ ಅಕ್ಟೋಬರ್‌ 29ರಂದು ಮನವಿ ಸಲ್ಲಿಸಿದೆ ಎಂದು ವಿವರಿಸಲಾಗಿದೆ.

ಅರ್ಜಿದಾರ ಪಕ್ಷದ ಜಪ್ತಿ ಮಾಡಲಾಗಿರುವ, ಮುಚ್ಚಲ್ಪಟ್ಟಿರುವ ಕಚೇರಿಗಳು ಬಾಡಿಗೆ ಸ್ಥಳಗಳಾಗಿದ್ದು, ದುರುದ್ದೇಶದಿಂದ ಎಸ್’ಡಿಪಿಐ ಹೆಸರಿಗೆ ಚ್ಯುತಿ ಉಂಟು ಮಾಡಲು ಜಪ್ತಿ ಮಾಡಲಾಗಿದೆ. ಮಂಗಳೂರಿನಲ್ಲಿರುವ ಎಸ್’ಡಿಪಿಐ ಮಾಹಿತಿ ಮತ್ತು ಸೇವಾ ಕೇಂದ್ರ, ಬಂಟ್ವಾಳ, ಅಡ್ಡೂರು, ಕುದ್ರೋಳಿ, ಪಾವೂರು, ಸುರತ್ಕಲ್’ನ ಚೊಕ್ಕಬೆಟ್ಟು, ಫರಂಗಿಪೇಟೆ, ಕಾಟಿಪಳ್ಳ, ಬಂಟ್ವಾಳದ ಮಂಚಿ, ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಕಚೇರಿ, ತಲಪಾಡಿಯ ಕೆ ಸಿ ರಸ್ತೆ, ಮಂಗಳೂರಿನ ಉಲ್ಲಾಳದಲ್ಲಿನ ಕಚೇರಿಗಳ ಮೇಲೆ ಅಕ್ರಮವಾಗಿ ದಾಳಿ ನಡೆಸಿ, ಜಪ್ತಿ ಮಾಡಿ, ಅವುಗಳನ್ನು ಮುಚ್ಚಲಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಯಾವುದೇ ಮಾಹಿತಿ ನೀಡದೇ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆ ಇರುವ ಎಸ್’ಡಿಪಿಐ ಕಚೇರಿಗಳು, ಚುನಾಯಿತ ಕಾರ್ಪೊರೇಟರ್‌ಗಳ ಕಚೇರಿಯನ್ನು ಮುಚ್ಚಲಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಎಸ್’ಡಿಪಿಐ ಪಕ್ಷದ ಅಡಿ ಹಲವು ಮಂದಿ ಚುನಾಯಿತರಾಗಿದ್ದಾರೆ. ದಕ್ಷಿಣ ಕನ್ನಡದಲ್ಲಿ 200ಕ್ಕೂ ಅಧಿಕ ಚುನಾಯಿತ ಪ್ರತಿನಿಧಿಗಳಿದ್ದು, ರಾಜಕೀಯ ಚಟುವಟಿಕೆ ನಡೆಸಲು ಅವರಿಗೆ ಕಚೇರಿಯ ಅಗತ್ಯವಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಪ್ರಕರಣದ ಹಿನ್ನೆಲೆ: 2022ರ ಸೆಪ್ಟೆಂಬರ್‌ 28ರಂದು ಕೇಂದ್ರ ಗೃಹ ಇಲಾಖೆಯು ಐದು ವರ್ಷಗಳ ಅವಧಿಗೆ ಪಿಎಫ್’ಐ ಮತ್ತು ಅದರ ಅಂಗ ಸಂಸ್ಥೆಗಳನ್ನು ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಅಡಿ ನಿಷೇಧಿಸಿತ್ತು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್‌ಗಳು, ಜಿಲ್ಲಾಧಿಕಾರಿ ಮತ್ತು ಇತರೆ ಅಧಿಕಾರಿಗಳು ಪೊಲೀಸರ ಜೊತೆಗೂಡಿ ಪಿಎಫ್’ಐ ಮತ್ತು ಅದರ ಅಂಗ ಸಂಸ್ಥೆಗಳು ಹಾಗೂ ದಕ್ಷಿಣ ಕನ್ನಡದ ಎಸ್’ಡಿಪಿಐ ಕಚೇರಿಗಳ ಮೇಲೆ ದಾಳಿ ನಡೆಸಿ, ಜಪ್ತಿ ಮಾಡಿದ್ದರು. ಜಪ್ತಿ ಮಾಡಿರುವ ಕಚೇರಿಗಳನ್ನು ತೆರವು ಮಾಡುವಂತೆ ಎಸ್‌’ಡಿಪಿಐ ಪ್ರತಿವಾದಿಗಳಿಗೆ ಮನವಿ ಮಾಡಿತ್ತು. ಇದಕ್ಕೆ ಪ್ರತಿವಾದಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಎಸ್‌ಡಿಪಿಐ ಹೈಕೋರ್ಟ್‌ ಕದ ತಟ್ಟಿದೆ.

Leave a Reply

Your email address will not be published. Required fields are marked *

error: Content is protected !!