ಹೆಬ್ರಿ: ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ – ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
ಹೆಬ್ರಿ: ಹೆಬ್ರಿ ತಾಲೂಕಿನ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಅಗ್ನಿ ಅವಘಡ ಸಂಭವಿಸಿ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗಾಯಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರೆಸಲಾಗಿದೆ.
ಹಾಸ್ಟೆಲ್ ನ ಹಿಂಭಾಗದಲ್ಲಿದ್ದ ತ್ಯಾಜ್ಯಕ್ಕೆ ಬೆಂಕಿ ಹಚ್ಚಲಾಗಿದ್ದು, ಇದುವೇ ಅವಘಡಕ್ಕೆ ಕಾರಣ ಎಂದು ವರದಿಯಾಗಿದೆ.
ನಾಲ್ಕನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಮೂವರು ವಿದ್ಯಾರ್ಥಿಗಳು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಹಾಗೂ ಓರ್ವ ವಿದ್ಯಾರ್ಥಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




