November 22, 2024

T20 ಸೆಮಿಫೈನಲ್: ಭಾರತಕ್ಕೆ ಹೀನಾಯ ಸೋಲು; ಫೈನಲ್‌ಗೆ ಇಂಗ್ಲೆಂಡ್: ನ. 13ಕ್ಕೆ ಇಂಗ್ಲೆಂಡ್ vs ಪಾಕಿಸ್ತಾನ ಫೈನಲ್ ಪಂದ್ಯಾಟ

0

ಅಡಿಲೇಡ್‌: ಈ ಬಾರಿಯ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌, ಭಾರತದ ವಿರುದ್ಧ 10 ವಿಕೆಟ್ ಅಂತರದ ಸುಲಭ ಜಯ ಸಾಧಿಸಿದೆ.

ಇಲ್ಲಿನ ಓವಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 168 ರನ್‌ ಕಲೆಹಾಕಿತ್ತು.

ಈ ಗುರಿ ಬೆನ್ನತ್ತಿದ ಇಂಗ್ಲೆಂಡ್‌ ಪರ ಆರಂಭಿಕರಾದ ನಾಯಕ ಜಾಸ್‌ ಬಟ್ಲರ್‌ ಮತ್ತು ಅಲೆಕ್ಸ್‌ ಹೇಲ್ಸ್‌ ಅತ್ಯುತ್ತಮವಾಗಿ ಬ್ಯಾಟ್‌ ಬೀಸಿದರು. ಭಾರತದ ಬೌಲರ್‌ಗಳೆದುರು ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ಈ ಇಬ್ಬರು ತಮ್ಮ ತಂಡಕ್ಕೆ ಇನ್ನೂ 24 ಎಸೆತಗಳು ಬಾಕಿ ಇರುವಂತೆಯೇ ಜಯ ತಂದುಕೊಟ್ಟರು.

ಇದು ಈ ಬಾರಿಯ ವಿಶ್ವಕಪ್‌ನಲ್ಲಿ ಯಾವುದೇ ತಂಡದ ಪರ ಮೊದಲ ವಿಕೆಟ್‌ ಜೊತೆಯಾಟದಲ್ಲಿ ಬಂದ ಅತ್ಯದಿಕ ಮೊತ್ತವಾಗಿದೆ. ನ್ಯೂಜಿಲೆಂಡ್‌ ವಿರುದ್ಧ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಪಾಕಿಸ್ತಾನದ ನಾಯಕ ಬಾಬರ್‌ ಅಜಂ ಮತ್ತು ಮೊಹಮ್ಮದ್‌ ರಿಜ್ವಾನ್‌ 105 ರನ್‌ ಗಳಿಸಿದ್ದರು. ಇದು ಎರಡನೇ ಅತ್ಯುತ್ತಮ ಜೊತೆಯಾಟವಾಗಿದೆ.

ಬೀಸಾಟವಾಡಿದ ಹೇಲ್ಸ್‌ ಕೇವಲ 47 ಎಸೆತಗಳಲ್ಲಿ 7 ಸಿಕ್ಸರ್‌ ಮತ್ತು 4 ಬೌಂಡರಿ ಸಹಿತ 89 ರನ್‌ ಚಚ್ಚಿದರು. ಅವರಿಗೆ ಉತ್ತಮ ಬೆಂಬಲ ನೀಡಿದ ಬಟ್ಲರ್‌ 49 ಎಸೆತಗಳಲ್ಲಿ 3 ಸಿಕ್ಸರ್‌ ಮತ್ತು 9 ಬೌಂಡರಿ ಸಹಿತ ರನ್‌ ಸಿಡಿಸಿದರು.

ಟೂರ್ನಿಯ ಫೈನಲ್‌ ಪಂದ್ಯವು ನವೆಂಬರ್‌ 13ರಂದು ಮೆಲ್ಬರ್ನ್‌ನಲ್ಲಿ ನಡೆಯಲಿದೆ. ಈಗಾಗಲೇ ಫೈನಲ್‌ ತಲುಪಿರುವ ಪಾಕಿಸ್ತಾನ ಮತ್ತು ಇಂಗ್ಲೆಂಡ್‌ ಪ್ರಶಸ್ತಿಗಾಗಿ ಸೆಣಸಾಡಲಿವೆ.

Leave a Reply

Your email address will not be published. Required fields are marked *

error: Content is protected !!