ಟಿ20 ವಿಶ್ವಕಪ್ ಸೆಮಿಫೈನಲ್: ಇಂಗ್ಲೆಂಡ್ ಗೆ 168 ರನ್ ಗುರಿ ನೀಡಿದ ಭಾರತ

ಅಡಿಲೇಡ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ‘ರನ್ ಮಷಿನ್’ ಖ್ಯಾತಿಯ ವಿರಾಟ್ ಕೊಹ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. ಹೀಗಾಗಿ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 168 ರನ್ ಕಲೆಹಾಕಿದೆ.
ಇಲ್ಲಿನ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ಜಾಸ್ ಬಟ್ಲರ್ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಆಡಿದ ಇಂಗ್ಲೆಂಡ್ ಬೌಲರ್‌ಗಳು, ಭಾರತದ ಆರಂಭಿಕರನ್ನು ಬೇಗನೆ ಔಟ್ ಮಾಡಿದರು.
ಉಪನಾಯಕ ಕೆ.ಎಲ್.ರಾಹುಲ್ ಕೇವಲ 5 ರನ್ ಗಳಿಸಿ ಔಟಾದರೆ, ನಾಯಕ ರೋಹಿತ್ ಶರ್ಮಾ 27 ಗಳಿಸಿದ್ದಾಗ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ (14) ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಹೀಗಾಗಿ, ರನ್ ಗಳಿಕೆಗೆ ಕಡಿವಾಣ ಬಿದ್ದಿತು.