September 20, 2024

ಮಂಗಳೂರು: ಬಿಜೆಪಿ ಮಾಡುತ್ತಿರುವುದು ಜನ ಸಂಕಲ್ಪ ಯಾತ್ರೆ ಅಲ್ಲ, ಸಂಕಷ್ಟ ಯಾತ್ರೆ -ಖಾದರ್ ವ್ಯಂಗ್ಯ

0

ಮಂಗಳೂರು: ಬಿಜೆಪಿ ಮಾಡುತ್ತಿರುವುದು ಜನ ಸಂಕಲ್ಪ ಯಾತ್ರೆ ಅಲ್ಲ ಸಂಕಷ್ಟ ಯಾತ್ರೆ ಮತ್ತು ಡಬಲ್ ಇಂಜಿನ್ ಸರ್ಕಾರದಲ್ಲಿ ಸೈಲೆನ್ಸರ್ ಮಾತ್ರ ಸದ್ದು ಮಾಡುತ್ತಿದೆಯೆಂದು ಶಾಸಕ ಹಾಗೂ ಮಾಜಿ ಸಚಿವ ಯು.ಟಿ.ಖಾದರ್ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಬಲ್ ಇಂಜಿನ್ ಸರಕಾರ ಅಪರೇಶನ್ ಕಮಲದ ಮೂಲಕ ಅಧಿಕಾರಕ್ಕೆ ಬಂದು ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು, ಕನಿಷ್ಠ ರಸ್ತೆಗಳ ಗುಂಡಿಗಳನ್ನು ಮುಚ್ಚಿಸುವ ತಾಕತ್ತು ಸರಕಾರಕ್ಕೆ ಇಲ್ಲ. ಮುಖ್ಯ ರಸ್ತೆಗಳು ಹೊಂಡ ಗುಂಡಿಗಳಿಂದ ತುಂಬಿದ್ದು, ನನ್ನ ಕ್ಷೇತ್ರದ ಪಿಡಬ್ಲ್ಯುಡಿ ವ್ಯಾಪ್ತಿಯ ರಸ್ತೆ ಗುಂಡಿ ಮುಚ್ಚಿಸಲು 5 ಲಕ್ಷ ರೂ. ಅನುದಾನ ಮಂಜೂರಾಗಿದೆ. ವಾಸ್ತವದಲ್ಲಿ ಕನಿಷ್ಠ 50 ಲಕ್ಷ ರೂ.ಗಳಾದರೂ ಬೇಕಾಗಿದೆ. ಶಾಸಕ ನಿಧಿಯನ್ನು ಬಳಸಿಕೊಂಡು ದೇರಳಕಟ್ಟೆ ಸೇರಿದಂತೆ ನನ್ನ ವ್ಯಾಪ್ತಿಯ ರಸ್ತೆಗಳ ಗುಂಡಿ ಮುಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕರ್ನಾಟಕದ ಬಿಜೆಪಿ ಸರಕಾರ 2019ರಿಂದ ಈವರೆಗಿನ ಬಜೆಟ್‌ನ ಭರವಸೆ, ಘೋಷಣೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಪಣಜಿಯಿಂದ ಮಂಗಳೂರಿಗೆ ವಾಟರ್ ವೇ ಇನ್ನೂ ಆರಂಭ ಆಗಿಲ್ಲ. ಸಾಗರ ಮಾಲ ಯೋಜನೆ ಬಗ್ಗೆ ಕಳೆದ ಐದು ವರ್ಷಗಳಿಂದ ಮಾತನಾಡುತ್ತಿದ್ದಾರೆ. ಮೀನುಗಾರರಿಗೆ ಮನೆ ಕೊಡುವುದಾಗಿ ಹೇಳಿ ಇನ್ನೂ ಕೊಟ್ಟಿಲ್ಲ ಎಂದಿದ್ದಾರೆ.

ಇನ್ನು ಒಳನಾಡು ಮೀನುಗಾರಿಕೆಯಡಿ ಸಿಗಡಿ ಕೃಷಿ ಇನ್ನೂ ಗುರಿ ತಲುಪಿಲ್ಲ. ಕೇರಳ ಮಾದರಿ ಸಾಲ ಪರಿಹಾರ ಆಯೋಗ ರಚನೆ ಇನ್ನೂ ಆಗಿಲ್ಲ. ಒಟ್ಟಿನಲ್ಲಿ ಮೀನುಗಾರರಿಗೆ ಬಿಜೆಪಿ ಸರಕಾರ ಮೋಸ ಮಾಡಿದ್ದಷ್ಟು ಯಾರೂ ಮಾಡಿಲ್ಲ. ಮೀನುಗಾರರ ಮುಗ್ಧತೆಯ ಲಾಭ ಪಡೆಯುತ್ತಾರೆ ಎಂದು ಯು.ಟಿ.ಖಾದರ್ ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!