September 20, 2024

ಮಂಗಳೂರು: ಫರಂಗಿಪೇಟೆಯಲ್ಲಿ ಕೆಎಸ್ಸಾರ್ಟಿಸಿ ಅಧಿಕಾರಿಗಳಿಂದ ಪರಿಶೀಲನೆ – ಸೋಮವಾರದಿಂದ ಎರಡು ಬಸ್ ಸಂಚಾರದ ಭರವಸೆ

0

ಬಂಟ್ವಾಳ: ಕೆಎಸ್ಸಾರ್ಟಿಸಿ ಬಸ್ ಸಂಚಾರದಲ್ಲಿ ವ್ಯತಯ ಹಾಗೂ ಇತರ ಸಮಸ್ಯೆಯಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗುತ್ತಿರುವ ಬಗ್ಗೆ ಪುದು ಗ್ರಾಮ ಪಂಚಾಯತ್ ವತಿಯಿಂದ ಮನವಿ ನೀಡಿದ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಅಧಿಕಾರಿಗಳು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪುದು ಗ್ರಾಮದ ಫರಂಗಿಪೇಟೆಯಲ್ಲಿ ಬೆಳಗ್ಗಿನ ಸಮಯ ಕೆಎಸ್ಸಾರ್ಟಿಸಿ ಬಸ್ ಗಳು ನಿಲುಗಡೆಯಾಗದೆ ಸಂಚರಿಸುವುದು, ಕೆಲವು ಬಸ್ ಗಳು ಜನರಿಂದ ತುಂಬಿ ಬರುವುದರಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿರುವ ಬಗ್ಗೆ ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ನೇತೃತ್ವದಲ್ಲಿ ಗುರುವಾರ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಆಗ್ರಹಿಸಲಾಗಿತ್ತು.‌
ಅಲ್ಲದೆ ಗ್ರಾಪಂ ನಿಯೋಗ ಶಾಸಕ ಯು.ಟಿ.ಖಾದರ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದು, ಅವರು ಕೂಡಾ ಕೆಎಸ್ಸಾರ್ಟಿಸಿ ವಿಭಾಗಿಯಾ ನಿಯಂತ್ರಣಾ ಅಧಿಕಾರಿ ರಾಜೇಶ್ ಶೆಟ್ಟಿ ಅವರೊಂದಿಗೆ ದೂರವಾಣಿಯಲ್ಲಿ ಸಂಪರ್ಕಿಸಿ ಕೂಡಲೇ ಸಮಸ್ಯೆ ಪರಿಹರಿಸುವಂತೆ ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಫರಂಗಿಪೇಟೆಗೆ ಭೇಟಿ ನೀಡಿದ ಕೆಎಸ್ಸಾರ್ಟಿಸಿ ವಿಭಾಗಿಯ ಅಧಿಕಾರಿ ಮರಿ ಸ್ವಾಮಿ, ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಿದರು. ಪುತ್ತೂರು, ವಿಟ್ಲ, ಧರ್ಮಸ್ಥಳ ಕಡೆಗಳಿಂದ ಬರುವ ಬಸ್ ಗಳು ಫರಂಗಿಪೇಟೆ ತಲುವಾಗ ಜನರಿಂದ‌ ತುಂಬಿರುತ್ತದೆ. ಹೀಗಾಗಿ ಈ ಭಾಗದ ಪ್ರಯಾಣಿಕರಿಗೆ ಬಸ್ ಹತ್ತಲು ಸಾಧ್ಯವಾದ ಸಮಸ್ಯೆ ಬಗ್ಗೆ ಗಮನಕ್ಕೆ ಬಂದಿದ್ದು ಸೋಮವಾರದಿಂದ ಬೆಳಗ್ಗಿನ ಸಮಯ ಎರಡು ಬಸ್ ಗಳು ಫರಂಗಿಪೇಟೆಯಿಂದಲೇ ಸಂಚರಿಸುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೆಎಸ್ಸಾರ್ಟಿಸಿ ಸಿಬ್ಬಂದಿ, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!