ಸುಳ್ಯ: ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ವಾಗ್ವಾದ – ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಡುವೆ ನೂಕಾಟ
ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಕೆಲವು ಸದಸ್ಯರ ನಡುವೆ ನೂಕಾಟ, ತಳ್ಳಾಟ ನಡೆದು ಕೈ ಕೈ ಮಿಲಾಯಿಸಿಕೊಂಡ ಘಟನೆ ಇಂದು ನಡೆದಿದೆ.
ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಇಂಜಿನಿಯರ್, ಆರೋಗ್ಯಾಧಿಕಾರಿ ಇಲ್ಲದೆ ಹಲವು ತಿಂಗಳಿನಿಂದ ನಗರ ಪಂಚಾಯತ್‌ನಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಸಭೆಗೆ ಇಂಜಿನಿಯರ್, ಆರೋಗ್ಯಾಧಿಕಾರಿ ಕರೆಸಿ ಎಂದು ಒತ್ತಾಯಿಸಿ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ ವಿರೋಧ ಪಕ್ಷದ ಸದಸ್ಯರಲ್ಲಿ ಓರ್ವರಾದ ಎಂ ವೆಂಕಟಪ್ಪ ಗೌಡ ಸಭೆಯ ಮುಂಭಾಗಕ್ಕೆ ಬಂದು ಟೇಬಲ್ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದು, ನಗರ ಪಂಚಾಯತ್ ಆಡಳಿತದ ವಿರುದ್ಧ ಘೋಷಣೆ, ಧಿಕ್ಕಾರ ಕೂಗಿದರು.
ಇನ್ನು ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿ ಸಭೆಯ ಮುಂಭಾಗಕ್ಕೆ ಬಂದಿದ್ದು, ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯರುಗಳಾದ ಬೂಡು ರಾಧಾಕೃಷ್ಣ ಮತ್ತು ರೋಹಿತ್ ಕೈಗೊಡಿ ಮತ್ತು ವಿರೋಧ ಪಕ್ಷದ ಸದಸ್ಯರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು. ಪರಸ್ಪರ ವಾಗ್ವಾದ, ಧಿಕ್ಕಾರ ಕೂಗಿದರು. ಈ ವೇಳೆ ಆಡಳಿತ, ವಿರೋಧ ಪಕ್ಷದ ಸದಸ್ಯರ ಮಧ್ಯೆ ಪರಸ್ಪರ ತಳ್ಳಾಟ, ಹೊಯ್ ಕೈ ನಡೆದು ಸಭೆ ವಿಕೋಪಕ್ಕೆ ತಲುಪಿದೆ.

ಈ ಸಂದರ್ಭದಲ್ಲಿ ನಗರ ಪಂಚಾಯತ್ ಅಧ್ಯಕ್ಷರು ಘಟನೆ ವಿಕೋಪಕ ತಿರುಗುವ ಸಾಧ್ಯತೆ ಕಂಡು ಬಂದಾಗ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದು, ಘಟನೆಯ ಮಾಹಿತಿ ತಿಳಿದು ಪೊಲೀಸರು ಆಗಮಿಸಿ ಸದಸ್ಯರನ್ನು ಸಮಾಧಾನ ಪಡಿಸಿದ್ದಾರೆ.




