ತ್ರಿಪುರಾದಲ್ಲಿ ಬಾಲಕಿಯ ಸಾಮೂಹಿಕ ಅತ್ಯಾಚಾರ, ಬಿಜೆಪಿ ಸಚಿವರ ಪುತ್ರ ಭಾಗಿ, ಬಂಧಿಸುವಂತೆ ಪ್ರತಿಪಕ್ಷಗಳ ಒತ್ತಾಯ
ಗುವಾಹಟಿ: ಚುನಾವಣೆ ನಡೆಯಲಿರುವ ತ್ರಿಪುರಾದಲ್ಲಿ, ರಾಜ್ಯ ಕಾರ್ಮಿಕ ಸಚಿವ ಭಗಬನ್ ದಾಸ್ ಅವರ ಪುತ್ರ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ವಿರೋಧ ಪಕ್ಷಗಳು ಆಡಳಿತಾರೂಢ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿವೆ.
ಅಕ್ಟೋಬರ್ 20 ರಂದು ಉನಕೋಟಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 16 ವರ್ಷದ ಅಪ್ರಾಪ್ತ ಬಾಲಕಿಯ ಸ್ನೇಹಿತೆ(ಹುಡುಗಿ) ಆಕೆಗೆ ಆಮಿಷ ಒಡ್ಡಿ, ಪಾರ್ಟಿ ನಡೆಯುತ್ತಿದ್ದ ಕುಮಾರ್‌ಘಾಟ್‌ನಲ್ಲಿರುವ ಬಾಡಿಗೆ ಮನೆಗೆ ಕರೆದೊಯ್ದಿದ್ದಾಳೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ನಂತರ ಆಕೆಯನ್ನು ಕೊಠಡಿಯೊಂದಕ್ಕೆ ಕರೆದೊಯ್ದು ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಜೆಪಿ ನೇತೃತ್ವದ ಸರ್ಕಾರದ ಸಚಿವರ ಪುತ್ರನೂ ಇದರಲ್ಲಿ ಭಾಗಿಯಾಗಿದ್ದಾರೆ. ಆದರೆ ಸರ್ಕಾರ ಆರೋಪಿಯನ್ನು ರಕ್ಷಿಸುತ್ತಿದೆ ಎಂದು ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಸಿಪಿಐ-ಎಂ ವಾಗ್ದಾಳಿ ನಡೆಸಿವೆ. ಅಲ್ಲದೆ ಸಚಿವರ ಪುತ್ರನನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿವೆ.





