ಇಳಂತಿಲ ಗ್ರೇನೆಡ್ ಪತ್ತೆ ಪ್ರಕರಣ:
ಸಮಗ್ರ ತನಿಖೆಗೆ ಸಿಪಿಐ(ಎಂ) ಒತ್ತಾಯ
ಬೆಳ್ತಂಗಡಿ: ಇಳಂತಿಲ ಗ್ರಾಮದ ಮಾಜಿ ಸೈನಿಕರ ಮನೆಯ ದಾರಿಯಲ್ಲಿ ಇತ್ತೀಚೆಗೆ ಪತ್ತೆಯಾದ ಗ್ರೇನೆಡ್ ಬಗ್ಗೆ ಹಲವಾರು ಸಂಶಯಗಳಿದ್ದು , ಈ ಬಗ್ಗೆ ಸರಿಯಾದ ರೀತಿಯಲ್ಲಿ ಸಮಗ್ರವಾದ ತನಿಖೆ ನಡೆಸಬೇಕು ಇದರ ಹಿಂದಿರುವವರು ಯಾರು ಎಂಬುದನ್ನು ಬಹಿರಂಗ ಪಡಿಸಬೇಕು ಎಂದು ಸಿಪಿಐಎಂ ತಾಲೂಕು ಸಮಿತಿ ಒತ್ತಾಯಿಸಿದೆ.
ಇಳಂತಿಲ ಗ್ರಾಮದ ಮಾಜಿ ಸೈನಿಕರೊರ್ವರ ಮನೆಯ ಸಮೀಪ ಪತ್ತೆಯಾದ ಗ್ರೇನೆಡ್ ಗಳು ಸೈನ್ಯಕ್ಕೆ ಸಶಾಸ್ತ್ರ ಪೂರೈಸುವ ಕಂಪನಿಯಲ್ಲಿ ತಯಾರಿಸಲಾಗಿದೆ. 40 ವರ್ಷ ಹಳೆಯದು ಎಂದು ಜಿಲ್ಲಾ ಎಸ್ಪಿ ಯವರು ಹೇಳಿಕೆ ನೀಡಿದ್ದಾರೆ ಆದರೆ ಸಮರ್ಪಕವಾದ ತನಿಖೆ ನಡೆಯುತ್ತಿರುವಂತೆ ಕಾಣಿಸುತ್ತಿಲ್ಲ. ಇದು ಅತ್ಯಂತ ಗಂಭೀರ ಪ್ರಕರಣವಾಗಿದೆ.
ಇದು ಎಲ್ಲಿಂದ ಬಂದಿದೆ ಇಷ್ಟು ದಿನ ಇವುಗಳನ್ನು ಎಲ್ಲಿ ಇರಿಸಲಾಗಿತ್ತು ಇನ್ನೂ ಯಾರ ಬಳಿಯಾದರೂ ಗ್ರೆನೇಡ್ ಗಳು ಇವೆಯೇ ಎಂಬ ಬಗ್ಗೆ ಸಮಗ್ರವಾದ ತನಿಖೆ ನಡೆಸಬೇಕಾಗಿದೆ ದಾರಿಯಲ್ಲಿ ಗ್ರೆನೆಡ್ ಪತ್ತೆಯಾಗಿರುವುದ ಜನರಲ್ಲಿ ಆತಂಕ ಉಂಟು ಮಾಡಿದೆ. ಇದರ ಹಿಂದೆ ಸ್ತಳೀಯರ ಕೈವಾಡವಿದೆಯೇ ಎಂಬ ಬಗ್ಗೆಯೂ ಸರಿಯಾದ ತನಿಖೆ ನಡೆಯಬೇಕಾಗಿದೆ.
ಇದು ದೇಶದ ರಕ್ಷಣೆಗೆ ಸಂಭಂಧಿಸಿದ ವಿಚಾರವಾಗಿದ್ದು, ಪೊಲೀಸರು ಕೂಡಲೇ ಸಮಗ್ರವಾದ ತನಿಖೆ ನಡೆಸಿ ಪ್ರಕರಣದ ಹಿನ್ನಲೆಯನ್ನು ಹೊರಗೆಳೆಯಬೇಕು ಎಂದು ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಶಿವಕುಮಾರ್ ಎಸ್. ಎಂ, ಮುಖಂಡರಾದ ವಸಂತ ನಡ, ಶೇಖರ್ ಲಾಯಿಲ, ಸುಜೀತ್ ಉಜಿರೆ ಒತ್ತಾಯಿಸಿದ್ದಾರೆ.





