ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದವರು ಪ್ರಯಾಣಿಸುತ್ತಿದ್ದ ಬಸ್‌ಗೆ ಬೆಂಕಿ: 17ಕ್ಕೂ ಹೆಚ್ಚು ಜನರು ಮೃತ್ಯು
ರಾಚಿ: ದಕ್ಷಿಣ ಪಾಕಿಸ್ತಾನದಲ್ಲಿ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದವರು ಪ್ರಯಾಣಿಸುತ್ತಿದ್ದ ಬಸ್‌ಗೆ ಬೆಂಕಿ ಬಿದ್ದು 17ಕ್ಕೂ ಹೆಚ್ಚು ಜನರು ಮೃತಪಟ್ಟಿರುವ ದುರಂತ ಬುಧವಾರ ರಾತ್ರಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಂಧ್ ಪ್ರಾಂತ್ಯದ ಹೈದರಾಬಾದ್ ಹಾಗೂ ಜಂಶೋರೊ ನಗರಗಳೊಂದಿಗೆ ಬಂದರು ನಗರ ಕರಾಚಿಗೆ ಸಂಪರ್ಕ ಕಲ್ಪಿಸುವ ಎಂ–9 ಮಾರ್ಗದಲ್ಲಿ ಈ ಅವಘಡ ಸಂಭವಿಸಿದೆ.
ಈ ವರೆಗೆ 17 ಪ್ರಯಾಣಿಕರು ಮೃತಪಟ್ಟಿದ್ದಾರೆ. 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಂಸದೀಯ ಆರೋಗ್ಯ ಕಾರ್ಯದರ್ಶಿ ಸಿರಾಜ್ ಖ್ವಾಸಿಂ ಮಾಹಿತಿ ನೀಡಿದ್ದಾರೆ.
ಬಸ್‌ನಲ್ಲಿ 35ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು.
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದವರು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದವರು. ಅವರೆಲ್ಲ ಖಾಸಗಿ ವಾಹನದ ಮೂಲಕ ದಾದು ಜಿಲ್ಲೆಗೆ ವಾಪಸ್ ಆಗುತ್ತಿದ್ದರು ಎಂದು ಜಂಶೋರೊ ಜಿಲ್ಲಾ ಕಮಿಷನರ್ ಆಸಿಫ್ ಜಮೀಲ್ ಹೇಳಿದ್ದಾರೆ.
ಸಿಂಧ್ ಪ್ರಾಂತ್ಯದಲ್ಲಿ ಪ್ರವಾಹದಿಂದಾಗಿ ಅತ್ಯಂತ ಹಾನಿಗೊಳಗಾದ ಜಿಲ್ಲೆಗಳಲ್ಲಿ ದಾದು ಸಹ ಒಂದಾಗಿದೆ.
ಬೆಂಕಿ ಹೊತ್ತಿಕೊಳ್ಳಲು ಕಾರಣವೇನೆಂಬುದು ಈವರೆಗೆ ತಿಳಿದುಬಂದಿಲ್ಲ. ಆದರೆ, ಬಸ್‌ನ ಹಿಂಭಾಗದಲ್ಲಿ ಕಾಣಿಸಿಕೊಂಡ ಬೆಂಕಿ ಸಂಪೂರ್ಣವಾಗಿ ಆವರಿಸಿದೆ. ಬಸ್‌ನಿಂದ ಜಿಗಿದು ಕೆಲವರು ಪ್ರಾಣ ಉಳಿಸಿಕೊಂಡಿದ್ದಾರೆ.




