ಅಜ್ಮೀರ್: ದಲಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪುರೋಹಿತ
ಜೈಪುರ: ಅಜ್ಮೀರ್ ಜಿಲ್ಲೆಯಲ್ಲಿ 25 ವರ್ಷದ ದಲಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
‘ಆರೋಪಿ ಸಂಜಯ್ ಶರ್ಮಾ ಸಂತ್ರಸ್ತೆ ಕುಟುಂಬದ ಪುರೋಹಿತನಾಗಿದ್ದು, ಅವರ ಪರವಾಗಿ ಪೂಜೆ ಸಲ್ಲಿಸುತ್ತಿದ್ದ. ಸಂತ್ರಸ್ತೆ ಮನೆಯಲ್ಲಿ ಒಬ್ಬರೇ ಇದ್ದಾಗ ಆರೋಪಿಯು ಅತ್ಯಾಚಾರವೆಸಗಿದ್ದ. ಅದನ್ನು ವಿಡಿಯೊ ಸಹ ಮಾಡಿದ್ದ. ಕೆಲವು ದಿನಗಳ ಬಳಿಕ ಸಂತ್ರಸ್ತೆಯಿಂದ ಹಣ ವಸೂಲು ಮಾಡಿದ್ದಲ್ಲದೇ, ಹಲವರೊಡನೆ ಸೇರಿ ಮತ್ತೆ ಅತ್ಯಾಚಾರವೆಸಗಿದ್ದ’ ಎಂದು ಅಜ್ಮೀರ್‌ನ ಉಪ ಪೊಲೀಸ್ ವರಿಷ್ಠಾಧಿಕಾರಿ ಛವಿ ಶರ್ಮಾ ಹೇಳಿದರು.
‘ಗುಂಪಿನಿಂದ ಅತ್ಯಾಚಾರ ಎಸಗುವ ವೇಳೆ ಮತ್ತು ಬರಿಸುವ ಔಷಧಗಳನ್ನು ನೀಡಿದ್ದರಿಂದ ಈ ಅತ್ಯಾಚಾರದಲ್ಲಿ ಎಷ್ಟು ಮಂದಿ ಭಾಗಿಯಾಗಿದ್ದರು ಎಂಬುದರ ಬಗ್ಗೆ ಮಾಹಿತಿ ನೀಡಲು ಸಂತ್ರಸ್ತೆಗೆ ಸಾಧ್ಯವಾಗುತ್ತಿಲ್ಲ. ಕಳೆದ ಒಂದು ತಿಂಗಳಿನಿಂದ ತನ್ನ ಮೇಲೆ ಹಲವಾರು ಬಾರಿ ಅತ್ಯಾಚಾರ ಮಾಡಲಾಗಿದ್ದು, ತಾನು ಆರೋಪಿಗಳ ವಶದಲ್ಲಿದ್ದೆ. ಆರೋಪಿಯು ತನ್ನ ಗಂಡ ಹಾಗೂ ಮಕ್ಕಳನ್ನು ಕೊಲ್ಲುವುದಾಗಿ ಮತ್ತು ತನ್ನ ವಿಡಿಯೊಗಳನ್ನು ಸಾರ್ವಜನಿಕಗೊಳಿಸುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ’ ಎಂದೂ ಅವರು ಹೇಳಿದರು.




