ಮಂಗಳೂರು: ಇಂಟರ್ನ್‌ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಪ್ರಕರಣ:
ಆರೋಪಿ ವಕೀಲ ರಾಜೇಶ್ ಭಟ್ ಪತ್ತೆಗೆ ಲುಕ್ ಔಟ್ ನೋಟಿಸ್ ಜಾರಿ
ಮಂಗಳೂರು: ತಮ್ಮ ಕಚೇರಿಯಲ್ಲಿ ತರಬೇತಿಯಲ್ಲಿದ್ದ ಇಂಟರ್ನ್‌ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪರಾರಿಯಾಗಿರುವ ವಕೀಲ ಕೆ.ಎಸ್.ಎನ್.ರಾಜೇಶ್ ಭಟ್ ಇನ್ನೂ ಪತ್ತೆಯಾಗದ ಕಾರಣದಿಂದಾಗಿ ವಕೀಲ ರಾಜೇಶ್ ಭಟ್ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.
ಇಂಟರ್ನ್‌ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ವಕೀಲ ಕೆ.ಎಸ್.ಎನ್.ರಾಜೇಶ್ ಭಟ್ ಈವರೆಗೂ ಪತ್ತೆಯಾಗಿಲ್ಲ. ಕೆ.ಎಸ್.ಎನ್.ರಾಜೇಶ್ ಭಟ್ ದೇಶ ಬಿಟ್ಟು ತೆರಳದಂತೆ, ಮತ್ತು ಅವರ ಪತ್ತೆಗೆ ದೇಶದ ಎಲ್ಲ ಏರ್ಪೋರ್ಟ್ ಗಳಲ್ಲಿ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.
ಈ ಮಧ್ಯೆ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಮಂಗಳೂರು ಪೊಲೀಸರು ಆರೋಪಿ ವಕೀಲ ಕೆ.ಎಸ್.ಎನ್. ರಾಜೇಶ್ ಭಟ್ ಗೆ ಸೇರಿದ ಎಲ್ಲಾ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿಸಿದ್ದಾರೆ. ತಮಿಳುನಾಡು, ಆಂಧ್ರ, ಕೇರಳ, ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳ ಪೊಲೀಸರ ನೆರವು ಸಹ ಕೇಳಿದ್ದಾರೆ. ಪ್ರಕರಣ ಬೇಧಿಸಲು ಮಂಗಳೂರು ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಅವರು 6 ತಂಡಗಳನ್ನು ರಚಿಸಿದ್ದಾರೆ.





