November 22, 2024

ಟೀಂ ಇಂಡಿಯಾ ಗೆಲ್ಲಲು ಪ್ರಯತ್ನಿಸಲೇ ಇಲ್ಲ: ಮುಖ್ಯ ಕೋಚ್ ರವಿ ಶಾಸ್ತ್ರಿ

0

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಸಂದರ್ಭದಲ್ಲಿ ಟೀಮ್ ಇಂಡಿಯಾ ಆಟಗಾರರು ಮಾನಸಿಕವಾಗಿ ಮತ್ತು ದೈಹಿಕವಾಗಿ ಬಳಲಿದ್ದರು ಎಂದು ತಂಡದ ನಿರ್ಗಮಿಸುತ್ತಿರುವ ಮುಖ್ಯ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ.

ಸೋಮವಾರ ನಡೆದ ಸೂಪರ್-12 ಹಂತದ ಎರಡನೇ ಗುಂಪಿನ ಅಂತಿಮ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಒಂಬತ್ತು ವಿಕೆಟ್ ಅಂತರದ ಗೆಲುವು ದಾಖಲಿಸಿ ಟೀಮ್ ಇಂಡಿಯಾ ಟೂರ್ನಿಯಿಂದ ಹೊರಬಿದ್ದಿದೆ. ಬಳಿಕ ಮಾತನಾಡಿದ ಶಾಸ್ತ್ರಿ ಅವರು, ‘ದೊಡ್ಡ ಪಂದ್ಯಗಳಲ್ಲಿ ಒತ್ತಡದ ಸನ್ನಿವೇಶಗಳಲ್ಲಿ ಗೆಲ್ಲುವ ಪ್ರಯತ್ನವನ್ನೇ ಆಟಗಾರರು ಮಾಡಲಿಲ್ಲ’ ಎಂದು ಹೇಳಿದ್ದಾರೆ.

ವಿಶ್ವಕಪ್ ಟೂರ್ನಿಯೊಂದಿಗೆ ಕೋಚ್ ಆಗಿ ಶಾಸ್ತ್ರಿ ಅವರ ಅವಧಿಯೂ ಅಂತ್ಯವಾಗಿದೆ. ಹೊಸ ಕೋಚ್ ಆಗಿ ಕರ್ನಾಟಕದ ರಾಹುಲ್ ದ್ರಾವಿಡ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ ವಿರುದ್ಧದ ಕೆಟ್ಟ ಪ್ರದರ್ಶನಕ್ಕೆ ಸಂಬಂಧಿಸಿ ‘ಸ್ಟಾರ್‌ ಸ್ಪೋರ್ಟ್ಸ್‌’ ವಾಹಿನಿಯಲ್ಲಿ ಇಯಾನ್ ಬಿಷಪ್ ಅವರು ಪ್ರಶ್ನಿಸಿದಾಗ ಉತ್ತರಿಸಿದ ಶಾಸ್ತ್ರಿ, ‘ವಿಶ್ರಾಂತಿ ಇಲ್ಲದಿರುವುದು ಎಂಬುದನ್ನಷ್ಟೇ ಮೊದಲು ಯೋಚಿಸಬಲ್ಲೆ’ ಎಂದು ಹೇಳಿದ್ದಾರೆ.

‘ನಾನು ಮಾನಸಿಕವಾಗಿ ಬಳಲಿದ್ದೇನೆ. ಈ ವಯಸ್ಸಿನಲ್ಲಿ ನಾನಿದನ್ನು ನಿರೀಕ್ಷಿಸಬಹುದು. ಆದರೆ, ಈ ಹುಡುಗರೂ (ಟೀಮ್ ಇಂಡಿಯಾ ಆಟಗಾರರನ್ನು ಉದ್ದೇಶಿಸಿ) ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲಿದ್ದಾರೆ. ಅವರೆಲ್ಲ ಆರು ತಿಂಗಳ ಬಯೋಬಬಲ್‌ನಲ್ಲಿ ಇದ್ದರು. ಐಪಿಎಲ್‌ ಟೂರ್ನಿ ಮತ್ತು ವಿಶ್ವಕಪ್ ನಡುವೆ ಅಂತರ ಬೇಕಿತ್ತು. ಯಾಕೆಂದರೆ, ದೊಡ್ಡ ಪಂದ್ಯಗಳನ್ನು ಆಡಬೇಕಾಗಿ ಬಂದಾಗ ಒತ್ತಡ ನಮ್ಮ ಮೇಲಿರುತ್ತದೆ. ಇಂಥ ಪರಿಸ್ಥಿತಿಗೆ ಯಾವ ರೀತಿ ಸಿದ್ಧರಾಗಿರಬೇಕೋ ಆ ರೀತಿ ಆಗಿಲ್ಲ’ ಎಂದು ಅವರು ಹೇಳಿದ್ದಾರೆ.

ಸೋಲಿಗೆ ನೆಪಗಳನ್ನು ಹೇಳಬೇಕೆಂಬುದು ನನ್ನ ಉದ್ದೇಶವಲ್ಲ. ಸೋಲು ಸಹಜ, ಸೋಲುವುದಕ್ಕೆ ನಾವು ಹೆದರುವುದೂ ಇಲ್ಲ. ಪ್ರಯತ್ನಿಸಿ ಸೋಲು ಬರಬಹುದು. ಆದರೆ ನಾವು ಗೆಲ್ಲಲು ಪ್ರಯತ್ನಿಸಲೇ ಇಲ್ಲ ಎಂದು ಶಾಸ್ತ್ರಿ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!