ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಕಾರು: ಚಾಲಕ ಸೇರಿ ಮೂವರು ಸಾವು
ಹುಬ್ಬಳ್ಳಿ : ತಾಲೂಕಿನ ವರೂರು ಗ್ರಾಮದ ಗಣೇಶ ಹೋಟೆಲ್ ಬಳಿ ವೇಗವಾಗಿ ಬರುತ್ತಿದ್ದ ಕಾರು ಚಾಲಕನು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಚಾಲಕ, ಮಹಿಳೆ ಸೇರಿ ಮೂವರು ಮೃತಪಟ್ಟ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ಅಪಘಾತದಲ್ಲಿ ದಾವಣಗೆರೆ ಮೂಲದ ಚಾಲಕ ಶಾರೂಖ (27), ಸೊಹೇಲ್ (26), ಚಿಕ್ಕಮಗಳೂರು ಜಿಲ್ಲೆ ಆಲದೂರಿನ ಎಚ್.ಕೆ. ಸುಶೀಲಾ (35) ಮೃತಪಟ್ಟಿದ್ದಾರೆ ಹಾಗೂ ಇನ್ನೋರ್ವ ಗಾಯಗೊಂಡಿದ್ದಾನೆ.
ಅವಲಕ್ಕಿ ವ್ಯಾಪಾರ ಮಾಡಿಕೊಂಡಿದ್ದ ಇವರು ದಾವಣಗೆರೆಯಿಂದ ರಾತ್ರಿ ಹುಬ್ಬಳ್ಳಿ ಕಡೆಗೆ ಬರುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಾಗ ಸೊಹೇಲ್ ಸ್ಥಳದಲ್ಲೆ ಮೃತಪಟ್ಟರೆ, ಗಂಭೀರ ಗಾಯಗೊಂಡಿದ್ದ ಚಾಲಕ ಮತ್ತು ಮಹಿಳೆ ಕಿಮ್ಸ್ ಗೆ ದಾಖಿಲಿಸಿದ ಸ್ವಲ್ಪ ಸಮಯದಲ್ಲೇ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.




