ಕಡಬ: ಐದು ಮಕ್ಕಳ ತಂದೆಯಿಂದ ಬಾಲಕಿ ಮೇಲೆ ಅತ್ಯಾಚಾರ:
ಆರೋಪಿಯ ಬಂಧನ
ಕಡಬ: ಐದು ಮಕ್ಕಳ ತಂದೆಯೋರ್ವ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯನ್ನಾಗಿಸಿದ ಘಟನೆ ಕಡಬದಲ್ಲಿ ನಡೆದಿದ್ದು, ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಬಂಧಿತನನ್ನು ಕಡಬ ತಾಲೂಕಿನ ಕೊಂಬಾರು ಗ್ರಾಮದ ಮರುವಂಜೆಯ ದಡ್ಡು ನಿವಾಸಿ ರುಕ್ಮಯ್ಯ ಎಂದು ಗುರುತಿಸಲಾಗಿದೆ.
ರುಕ್ಮಯ್ಯನಿಗೆ ಐದು ಜನ ಮಕ್ಕಳಿದ್ದು, ಮಕ್ಕಳನ್ನು ನೋಡಿಕೊಳ್ಳಲೆಂದು ಮೂರು ವರ್ಷದ ಹಿಂದೆ ಯುವತಿ ಆತನ ಮನೆಗೆ ಬಂದು ವಾಸವಾಗಿದ್ದಳು. ಇನ್ನು ಈ ಅಪ್ರಾಪ್ತ ಯುವತಿ ಆರೋಪಿಯ ಸೊಸೆಯಾಗಿದ್ದಾಳೆ.
ಆದರೆ ಫೆಬ್ರವರಿ ತಿಂಗಳಿನಲ್ಲಿ ಒಂದು ದಿನ ಯುವತಿಯನ್ನು ಬಲವಂತವಾಗಿ ಮನೆಯಲ್ಲಿ ಎಲ್ಲರೂ ಮಲಗಿದ ಸಮಯ ಮನೆಯ ಹಾಲ್‌ನ ಪಕ್ಕದಲ್ಲಿರುವ ರೂಮಿಗೆ ಕರೆದುಕೊಂಡು ಹೋಗಿ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ.
ಇನ್ನು ಈ ವಿಷಯವನ್ನು ಯಾರಿಗೂ ಹೇಳಬೇಡ ನಿನ್ನನ್ನು ನಾನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿ, ನೀನು ಏನಾದರೂ ಈ ವಿಷಯವನ್ನು ಹೇಳಿದರೆ ನಿನ್ನನ್ನು ಮನೆಯಿಂದ ಓಡಿಸಿಬಿಡುತ್ತೇನೆ ಎಂದು ಬೆದರಿಸಿರುತ್ತಾನೆ. ಅದಲ್ಲದೆ 4-5 ಬಾರಿ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ.
ಸೆ.9ರಂದು ಕೊಂಬಾರು ಗ್ರಾಮಕ್ಕೆ ಬರುವ ಆಶಾಕಾರ್ಯಕರ್ತೆ ಸುನಿತಾ ಎಂಬವರು ಸಂತ್ರಸ್ತ ಬಾಲಕಿಯ ಹೊಟ್ಟೆಯನ್ನು ನೋಡಿ ಎಷ್ಟು ತಿಂಗಳು ಎಂದು ಕೇಳಿ ವಿಚಾರಿಸಿರುತ್ತಾರೆ. ಆ ಸಮಯದಲ್ಲಿ ಬಾಲಕಿ ಆಶಾಕಾರ್ಯಕರ್ತೆಗೆ ತನ್ನ ಮಾವನಾದ ರುಕ್ಮಯ್ಯ ಲೈಂಗಿಕವಾಗಿ ಬಳಸಿಕೊಂಡಿರುವ ಬಗ್ಗೆ ತಿಳಿಸಿದ್ದು, ಆಶಾಕಾರ್ಯಕರ್ತೆ ಸುನಿತಾರವರು ಪ್ರಗ್ನೆನ್ಸಿ ಟೆಸ್ಟ್ ಕಿಟ್ ತೆಗೆದುಕೊಂಡು ಟೆಸ್ಟ್ ಮಾಡಿದಾಗ ಬಾಲಕಿ ಗರ್ಭಿಣಿಯಾಗಿರುವುದು ದೃಡಪಟ್ಟಿದೆ.
ಇನ್ನು ಸಂತ್ರಸ್ತ ಯುವತಿ ನೀಡಿದ ದೂರಿನಂತೆ ಕಡಬ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ.




