ಅಯೋಧ್ಯೆಯ ನಿಗದಿತ ಜಾಗದಲ್ಲಿ ಮಸೀದಿ ನಿರ್ಮಾಣ ವಿಚಾರ: ಸುಪ್ರೀಂ ಕೋರ್ಟ್ ಆದೇಶ ನೀಡಿ 3 ವರ್ಷಗಳೇ ಕಳೆದರೂ ಎನ್‌ಒಸಿ ನೀಡಲು ನಿರಾಕರಣೆ

ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆಯ ನಿಗದಿತ ಜಾಗದಲ್ಲಿ ಮಸೀದಿ ನಿರ್ಮಾಣ ಮಾಡಲು ಅವಕಾಶ ನೀಡಿ ಸುಪ್ರೀಂ ಕೋರ್ಟ್ ಆದೇಶ ನೀಡಿ ಸುಮಾರು ಮೂರು ವರ್ಷಗಳೇ ಕಳೆದಿವೆ. ಆದರೆ, ಅಗ್ನಿಶಾಮಕ ಸೇವೆಗಳು, ಮಾಲಿನ್ಯ ಮಂಡಳಿ ಮತ್ತು ನಾಗರಿಕ ಪ್ರಾಧಿಕಾರಗಳಿಂದ ನಿರಾಕ್ಷೇಪಣಾ ಪ್ರಮಾಣಪತ್ರಗಳು (ಎನ್‌ಒಸಿ) ದೊರೆಯದ ಕಾರಣ ನಿರ್ಮಾಣ ಕಾರ್ಯ ವಿಳಂಬವಾಗುತ್ತಲೇ ಇದೆ.
ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಮಸೀದಿ ನಿರ್ಮಾಣಕ್ಕಾಗಿ ‘ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್’ಗೆ ಧನ್ನಿಪುರ ಗ್ರಾಮದಲ್ಲಿ ಐದು ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ.
ಮಂಡಳಿಯು ಮಸೀದಿ, ಆಸ್ಪತ್ರೆ ಮತ್ತು ವಸ್ತು ಸಂಗ್ರಹಾಲಯ ನಿರ್ಮಾಣಕ್ಕಾಗಿ ‘ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಟ್ರಸ್ಟ್’ ಅನ್ನು ಸ್ಥಾಪಿಸಿದೆ.
ಮಸೀದಿ ನಿರ್ಮಾಣಕ್ಕೆ ಎನ್‌ಒಸಿ ನೀಡಿ ಎಂದು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ಜುಲೈ 15ರಂದು ಅಗ್ನಿಶಾಮಕ ಸೇವೆಗಳು, ನಾಗರಿಕ ವಿಮಾನಯಾನ, ಅಯೋಧ್ಯೆ ಮುನ್ಸಿಪಲ್ ಕಾರ್ಪೊರೇಷನ್, ನೀರಾವರಿ, ಲೋಕೋಪಯೋಗಿ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜಿಲ್ಲಾಡಳಿತ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದೆ ಎಂದು ಐಐಸಿಎಫ್ ಕಾರ್ಯದರ್ಶಿ ಆಥರ್ ಹುಸೇನ್ ಸಿದ್ದಿಕಿ ಹೇಳಿದ್ದಾರೆ.