ಪ್ರಧಾನಿ ಮೋದಿ ಭೇಟಿ: ಮಂಗಳೂರಿನಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ, ಕೆಂಜಾರು-ಕೆಪಿಟಿ, ಹೆದ್ದಾರಿ ಸಂಚಾರ ನಿಷೇಧ

ಮಂಗಳೂರು: ಬಜಪೆ-ಕೆಂಜಾರು-ಮರವೂರು-ಮರಕಡ-ಕಾ ವೂರು-ಬೋಂದೆಲ್- ಪದವಿನಂಗಡಿ-ಯೆಯ್ನಾಡಿ ಹಾಗೂ ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ಜಂಕ್ಷನ್ ನಿಂದ ಕೊಟ್ಟಾರ ಚೌಕಿ-ಕೂಳೂರು-ಎನ್‌ಎಂಪಿಎವರೆಗೆ ಹಾದು ಹೋಗುವ ರಸ್ತೆಯ ಎರಡೂ ಬದಿಗಳಲ್ಲಿ ಯಾವುದೇ ರೀತಿಯ ವಾಹನಗಳನ್ನು ನಿಲ್ಲಿಸುವಂತಿಲ್ಲ. ಇದೇ ರಸ್ತೆಗಳಲ್ಲಿ ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಎಲ್ಲ ಸರಕು ವಾಹನ, ಘನ ವಾಹನ, ಪ್ರವಾಸಿ ವಾಹನ ಹಾಗೂ ಇತರ ಸಾರ್ವಜನಿಕ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಆದರೆ ಗೋಲ್ಡ್ ಪಿಂಚ್ ಸಿಟಿ ಮೈದಾನದ ಸಮಾವೇಶಕ್ಕೆ ಹೋಗುವ ಅತೀ ಗಣ್ಯ ವ್ಯಕ್ತಿಗಳು, ಗಣ್ಯ ವ್ಯಕ್ತಿಗಳು ಹಾಗೂ ಸಾರ್ವಜನಿಕರ ವಾಹನಗಳು ನಿಗದಿತ ನಿಲುಗಡೆ ಸ್ಥಳಗಳಿಗೆ ಹೋಗಲು, ಮತ್ತು ತುರ್ತು ಸೇವೆಯ ವಾಹನಗಳಿಗೆ ನಿಷೇಧಿತ ರಸ್ತೆಗಳಲ್ಲಿ ಸಂಚರಿಸಬಹುದು.
ಗೋಲ್ಡ್ ಪಿಂಚ್ ಮೈದಾನ ಮತ್ತು ಸುತ್ತಲಿನ 500 ಮೀ. ವ್ಯಾಪ್ತಿಯ ರಸ್ತೆಗಳಲ್ಲೂ ಎಲ್ಲ ವಾಹನಗಳ ನಿಲುಗಡೆ ಗೆ ನಿಷೇಧ. ಸೆ. 2ರಂದು ಬೆಳಗ್ಗೆ 10ರಿಂದ ಪ್ರಧಾನಿಯವರು ವಿಮಾನ ನಿಲ್ದಾಣದಿಂದ ನಿರ್ಗಮಿಸುವವರೆಗೆ ನಂತೂರು, ಬಿಕರ್ನಕಟ್ಟೆ- ಕೈಕಂಬ, ಮಂಗಳ ಜ್ಯೋತಿ, ವಾಮಂ ಜೂರು, ಪೊರ್ಕೊಡಿ, ಮೂಲ್ಕಿ, ಹಳೆಯಂಗಡಿ, ಜೋ ಕಟ್ಟೆ ಕ್ರಾಸ್, ಲೇಡಿಹಿಲ್ ಸೇರಿದಂತೆ 9 ಜಂಕ್ಷನ್‌ಗಳಲ್ಲಿ ಸಂಚಾರ ಬದಲಾಯಿಸಿ, ಪರ್ಯಾಯ ರಸ್ತೆ ಗುರುತಿಸ ಲಾಗಿದೆ.
- ಉಡುಪಿ, ಮೂಲ್ಕಿ, ಸುರತ್ಕಲ್ ಹಾಗೂ ಬಜಪೆ ಕಡೆಗಳಿಂದ ಕಾರ್ಯಕ್ರಮದ ಸ್ಥಳಕ್ಕೆ ಫಲಾನುಭವಿ ಮತ್ತು ಜನರನ್ನು ಕರೆದುಕೊಂಡು ಬರುವ ಬಸ್ ಗಳು ಕೂಳೂರು ಜಂಕ್ಷನ್‌ನಲ್ಲಿ ಜನರನ್ನು ಇಳಿಸಿ ನಿಗದಿಪಡಿಸಲಾದ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸ ಬೇಕು. ಮಂಗಳೂರು ನಗರ, ಮೂಡುಬಿದಿರೆ, ಬಂಟ್ವಾಳ, ಪುತ್ತೂರು, ಸುಳ್ಯ, ಮಡಿಕೇರಿ, ತೊಕ್ಕೊಟ್ಟು, ಉಳ್ಳಾಲ, ತಲಪಾಡಿ, ಕೇರಳ ಕಡೆಗಳಿಂದ ಬರುವ ವಾಹನಗಳು ಕೊಟ್ಟಾರ ಚೌಕಿ ಜಂಕ್ಷನ್ ಬಳಿ ಇಳಿಸಿ ನಿಗದಿಪಡಿಸಿದ ಸ್ಥಳಗಳಲ್ಲಿ ವಾಹನ ನಿಲ್ಲಿಸಬೇಕು.