April 11, 2025

ವೆನ್ಲಾಕ್ ಆಸ್ಪತ್ರೆಯ ಜನರಲ್ ವಾರ್ಡಿನ ಮಂಚದಡಿ ಒಂದು ತಿಂಗಳು ಅಂಗಾತ ಮಲಗಿದ್ದ ರೋಹನ್ ಮೊಂತೇರೋ..!

0

35 ವರ್ಷಗಳ ಹಿಂದಿನ ಮಾತು. ತನ್ನ ಅಣ್ಣನಿಗೆ ಅವಘಡ ಉಂಟಾಗಿ ಸೊಂಟ, ಕಾಲಿಗೆ ಗಂಭೀರ ಗಾಯವಾಗಿತ್ತು. ಆ ಸಂದರ್ಭ ಬಡವರ ಆಶಾಕಿರಣವಾಗಿದ್ದ ಮಂಗಳೂರಿನ ಸರಕಾರಿ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಒಂದು ತಿಂಗಳ ಸುದೀರ್ಘ ಚಿಕಿತ್ಸೆ ನಡೆಯಿತು. ರೋಗಿ ಅಣ್ಣನಿಗೆ ಸಹಾಯಕರಾಗಿ ತಮ್ಮ ಆಸ್ಪತ್ರೆಯಲ್ಲಿ ನಿಂತಿದ್ದರು. ಅಣ್ಣ ಜನರಲ್ ವಾರ್ಡಿನ ಹಾಸಿಗೆಯಲ್ಲಿ ಮಲಗಿದ್ದಾಗ ತಮ್ಮ ಆ ಹಾಸಿಗೆಯ ಕೆಳಗೆ ಖಾಲಿ ನೆಲದಲ್ಲಿ ಒಂದು ತುಂಡು ಬೆಡ್ ಶೀಟ್, ತಲೆದಿಂಬು ಇಲ್ಲದೇ ಅಂಗಾತ ಮಲಗಿ ಒಂದು ತಿಂಗಳನ್ನು ಶೋಚನೀಯವಾಗಿ ಕಳೆದಿದ್ದರು..!

ಆ ತಮ್ಮ ಬೇರೆ ಯಾರೂ ಅಲ್ಲ. ಇಂದು ಇಡೀ ಸಮಾಜ ಗುರುತಿಸಿರುವ, ಬಡವರ ಬಗ್ಗೆ ಅಪಾರ ಕಾಳಜಿ ವಹಿಸುವ ಆಗರ್ಭ ಶ್ರೀಮಂತ, ಮಂಗಳೂರಿನ ಹೆಸರಾಂತ ಬಿಲ್ಡರ್ ರೋಹನ್ ಕಾರ್ಪೊರೇಶನ್ ಲಿಮಿಟೆಡ್ ಮಾಲಕರಾದ ರೋಹನ್ ಮೊಂತೇರೋ ಅವರು.

ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಕಾರುಣ್ಯ ಯೋಜನೆಯ ಮೂಲಕ ಕಳೆದ ನಾಲ್ಕೂವರೆ ವರ್ಷಗಳಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ರಾತ್ರಿಯ ಭೋಜನವನ್ನು ಉಚಿತವಾಗಿ ವಿತರಿಸುತ್ತಿದೆ. ಪ್ರತಿನಿತ್ಯ ನೂರಾರು ಜನರು ಇದರ ಸದುಪಯೋಗ ಪಡೆಯುತ್ತಾರೆ. ಇದನ್ನು ಗಮನಿಸಿ ಆಸಕ್ತರಾದ ಉದ್ಯಮಿ ರೋಹನ್ ಮೊಂತೇರೋ ಆಗಸ್ಟ್ ಒಂದು ತಿಂಗಳು ತಾನು ಪ್ರಾಯೋಜಿಸುವ ಇರಾದೆ ವ್ಯಕ್ತಪಡಿಸಿ ಒಂದು ತಿಂಗಳ ಮೊತ್ತ ರೂ. 2,25,000/- ವನ್ನು ಎಂ.ಫ್ರೆಂಡ್ಸ್ ಖಾತೆಗೆ ಜಮೆ ಮಾಡಿದರು. ಕಳೆದ ಆಗಸ್ಟ್ 15 ರಂದು ವೆನ್ಲಾಕ್ ಆಸ್ಪತ್ರೆಗೆ ಆಗಮಿಸಿ ಅಸಹಾಯಕರಿಗೆ ಸ್ವತಃ ತನ್ನ ಕೈಯ್ಯಾರೆ ಭೋಜನ ಬಡಿಸಿದರು. ಅಶಕ್ತರ ನೋವಿಗೆ ಸ್ಪಂದಿಸಿದರು. ರೋಗಿಗಳೊಂದಿಗೆ ಉಭಯ ಕುಶಲೋಪರಿ ಮಾತನಾಡಿದರು. ಈ ಸಂದರ್ಭ ರೋಗಿಗಳ ಜೊತೆಗಾರರಿಗೆ ಧೈರ್ಯ ಸ್ಥೈರ್ಯ ತುಂಬುವ ಸಲುವಾಗಿ ತಾನು ವೆನ್ಲಾಕ್ ಆಸ್ಪತ್ರೆಯ ಹಾಸಿಗೆಯಡಿ ಒಂದು ತಿಂಗಳು ಮಲಗಿರುವ ಅನುಭವವನ್ನು ಹಂಚಿಕೊಂಡರು. ಆ ಸಂದರ್ಭ ರೋಹನ್ ಕುಟುಂಬ ಬಡತನದಲ್ಲಿತ್ತು. ಅವರ ಒಳ್ಳೆಯ ಗುಣಕ್ಕೆ ಭಗವಂತನು ಶ್ರೀಮಂತಿಕೆ ನೀಡಿರಬಹುದು.

 

 

ಏನೇ ಸಮಸ್ಯೆಗಳು ಎದುರಾದರೂ ಒಂದು ದಿನವೂ ನಿಲ್ಲಿಸದೇ ಸದಾ ಅನ್ನದಾನ ಮಾಡುತ್ತಿರುವ ಎಂ.ಫ್ರೆಂಡ್ಸ್ ಟ್ರಸ್ಟಿಗೆ ಪ್ರತಿ ವರ್ಷ ಆಗಸ್ಟ್ ತಿಂಗಳ ಪ್ರಾಯೋಜಕತ್ವ ನೀಡುವ ಜೊತೆಗೆ ಈ ನಡುವೆ ಕಾರುಣ್ಯಕ್ಕೆ ಆರ್ಥಿಕ ಸಮಸ್ಯೆ ಎದುರಾದರೆ ರೋಹನ್ ಕಾರ್ಪೊರೇಶನ್ ಎಂ.ಫ್ರೆಂಡ್ಸ್ ಜೊತೆಗಿದೆ ಎಂದು ರೋಹನ್ ಭರವಸೆ ನೀಡಿದರು.

ರೋಹನ್ ಅವರ ಈ ವರ್ಷದ ಪ್ರಾಯೋಜಕತ್ವ ಆಗಸ್ಟ್ ತಿಂಗಳು ನಿನ್ನೆಗೆ (01-08-2022 ರಿಂದ 31-08-2022) ಪೂರ್ತಿಗೊಂಡರೂ ಅವರ ಸಹಕಾರದ ಕಾರಣದಿಂದಾಗಿ ಹಸಿವಿನ ಹೊಟ್ಟೆ ತಣಿಸಿದ ಸುಮಾರು ಹನ್ನೊಂದು ಸಾವಿರ ಅಶಕ್ತರ ತುಟಿಗಳ ಪ್ರಾರ್ಥನೆ ರೋಹನ್ ಮೊಂತೇರೋ ಅವರಿಗಿದೆ. ಅವರ ದಾನಕ್ಕೆ ಸೃಷ್ಟಿಕರ್ತನು ಪ್ರತಿಫಲ ನೀಡಲಿ. ಅವರ ಉದ್ಯಮ ಯಶಸ್ವಿಯಾಗಲಿ.
-ರಶೀದ್ ವಿಟ್ಲ.

Leave a Reply

Your email address will not be published. Required fields are marked *

error: Content is protected !!