ಜಿಲ್ಲಾ ಕಾಂಗ್ರೆಸ್ ಕಚೇರಿ ಗೋಡೆ ಮೇಲೆ ಸಾವರ್ಕರ್ ಫೋಟೊ ಅಂಟಿಸಿರುವುದು ನಾನೇ ಎಂದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ
ವಿಜಯಪುರ: ಜಿಲ್ಲಾ ಕಾಂಗ್ರೆಸ್ ಕಚೇರಿ ಗೋಡೆ ಮೇಲೆ ಸಾವರ್ಕರ್ ಫೋಟೊ ಅಂಟಿಸಿರುವುದು ನಾನೇ ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಹೂಗಾರ ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿ ಸುದ್ದಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಪದೇ ಪದೇ ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದು ಹೇಳಿಕೆ ನೀಡುವ ಮೂಲಕ ಅವಮಾನ ಮಾಡುತ್ತಿದ್ದಾರೆ. ಅಲ್ಲದೇ, ಸಾವರ್ಕರ್ ಫೋಟೊ ಸುಟ್ಟು ಹಾಕಿದ್ದಾರೆ.
ಇದನ್ನು ಖಂಡಿಸಿ ಕಾಂಗ್ರೆಸ್ ಕಚೇರಿ ಮೇಲೆ ಫೋಟೊ ಅಂಟಿಸಿದ್ದೇನೆ ಎಂದರು. ಕಾಂಗ್ರೆಸ್ ನವರು ಸಾವರ್ಕರ್ ಅವರನ್ನು ಗೌರವಿಸಬೇಕು, ಅವರ ಪುಸ್ತಕ ಓದಬೇಕು. ಕಾಂಗ್ರೆಸ್ ನವರು ಸಾವರ್ಕರ್ ಬಗ್ಗೆ ಅಪಪ್ರಚಾರ ನಿಲ್ಲಿಸಬೇಕು, ಇಲ್ಲವಾದರೆ ಕಾಂಗ್ರೆಸ್ ನಾಯಕರ ಮನೆ ಮೇಲೆ ಫೋಟೊ ಅಂಟಿಸಬೇಕಾಗುತ್ತದೆ ಎಚ್ಚರಿಕೆ ನೀಡಿದರು.




