ಪುತ್ತೂರು: ವಸತಿ ಸಮುಚ್ಚಯ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಬಾಲಕ ಮೃತ್ಯು
ಪುತ್ತೂರು: ಇಲ್ಲಿನ ಬೊಳುವಾರು ವಸತಿ ಸಮುಚ್ಚಯ ಮಹಡಿಯಿಂದ ಶುಕ್ರವಾರ ಸಂಜೆ ಬಿದ್ದು ಗಂಭೀರ ಗಾಯಗೊಂಡಿದ್ದ ಸುಧಾನ ವಸತಿ ಶಾಲೆಯ ಪ್ರೌಢಶಾಲೆಯ 9ನೇ ತರಗತಿಯ ಬಾಲಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಪದ್ಮುಂಜ ಕೆನರ ಬ್ಯಾಂಕ್ ನಿವೃತ್ತ ಮ್ಯಾನೇಜರ್, ಬೊಳುವಾರು ಶ್ರೀ ದುರ್ಗಾಪರಮೇಶ್ವರೀ ಮಲರಾಯ ಸಪರಿವಾರ ಕ್ಷೇತ್ರದ ವಿಶ್ವಸ್ಥ ಮಂಡಳಿ ಅಧ್ಯಕ್ಷ ಮನೋಹರ ರೈ ಅವರ ಪುತ್ರ ಸುಶಾನ್ ರೈ ಮೃತಪಟ್ಟ ಬಾಲಕ.
ಸುಶಾನ್ ರೈ ಅವರು ಶಾಲೆಯಿಂದ ಮನೆಗೆ ಹೋಗದೆ ಬೊಳುವಾರು ವಸತಿ ಸಮುಚ್ಚಯಕ್ಕೆ ತೆರಳಿದ್ದರು. ಕೆಲ ಸಮಯದ ವೇಳೆ ಅವರು ಸಮುಚ್ಚಯದ ಕೆಳಗೆ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಘಟನೆ ನಡೆದ ತಕ್ಷಣ ಅಲ್ಲಿದ್ದ ಸ್ಥಳೀಯರು ಸೇರಿ ಆತನನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಮೃತರು ತಂದೆ ಮನೋಹರ್ ರೈ, ತಾಯಿ ಸುಧಾ ಎಂ. ರೈ ಮತ್ತು ಸಹೋದರ ಸೋಹನ್ ರೈ ಅವರನ್ನು ಅಗಲಿದ್ದಾರೆ.




