ಸುಳ್ಯ: ಹೊಳೆಯಲ್ಲಿ ಮೀನು ಹಿಡಿಯಲು ಹೋಗಿ ಕರೆಂಟ್ ಶಾಕ್ ಹೊಡೆದು ಯುವಕ ದುರ್ಮರಣ
ಸುಳ್ಯ: ದೇವಚಳ್ಳ ಗ್ರಾಮದ ಕರಂಗಲ್ಲಿನ ವ್ಯಕ್ತಿಯೋರ್ವರು ತಮ್ಮ ಸ್ನೇಹಿತನೊಂದಿಗೆ ಮಾಡ ಬಾಗಿಲು ಬಳಿ ನದಿಗೆ ಮೀನು ಹಿಡಿಯಲು ಹೋಗಿ ಕರೆಂಟ್ ಶಾಕ್ ಹೊಡೆದು ಮೃತರಾದ ಘಟನೆ ವರದಿಯಾಗಿದೆ.
ನ.5 ರ ರಾತ್ರಿ ಕರಂಗಲ್ಲಿನ ದಿ. ಕೇಶವ ಗೌಡ ಅವರ ಪುತ್ರ ಕರಂಗಲ್ಲಿನ ಪ್ರಕಾಶ್ ಎಂಬವರು ಮೃತ ವ್ಯಕ್ತಿಯಾಗಿದ್ದಾರೆ. ಗೆಳೆಯನೊಂದಿಗೆ ಸೇರಿ ಬ್ಯಾಟರಿ ಬಳಸಿ ಮೀನು ಹಿಡಿಯಲು ತೆರಳಿದ್ದ ಸಂದರ್ಭ ಮೀನು ಹಿಡಿಯುತ್ತಿರುವ ವೇಳೆ ಇನ್ವರ್ಟರ್ ಬ್ಯಾಟರಿಯಲ್ಲಿ ವಿದ್ಯುತ್ ಪ್ರವಹಿಸಿ ಪ್ರಕಾಶ್ ಮೃತರಾಗಿರುವುದಾಗಿ ತಿಳಿದು ಬಂದಿದೆ.
ಸುಬ್ರಹ್ಮಣ್ಯ ಎಸ್ ಐ ಜಂಬೂರಾಜ್ ಮಾಹಾಜನ್ ಪೊಲೀಸರೊಂದಿಗೆ ಸ್ಥಳಕ್ಕೆ ತೆರಳಿ ತನಿಖೆ ನಡೆಸಿರುವುದಾಗಿ ತಿಳಿದು ಬಂದಿದೆ. ಮೃತರು ತಾಯಿ ಭುವನೇಶ್ವರಿ, ಪತ್ನಿ ದಿವ್ಯ ಹಾಗೂ ಓರ್ವ ಪುತ್ರಿ, ಸಹೋದರ, ಸಹೋದರಿ ಹಾಗೂ ಬಂಧುಗಳನ್ನು ಅಗಲಿದ್ದಾರೆ.




