ವಿಶ್ವವಿದ್ಯಾನಿಲಯ ಕ್ಯಾಂಪಸ್ ನಲ್ಲಿ ಡ್ರಗ್ಸ್ ಮಾರಾಟ: 1 ಕೋಟಿ ರೂ. ಮೌಲ್ಯದ ಡ್ರಗ್ಸ್ ಸಹಿತ ಮಾಡೆಲ್ ಬಂಧನ
ನವದೆಹಲಿ: ಒಂದು ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ನೊಂದಿಗೆ ಮಾಡೆಲ್ ಹಾಗೂ ಆತನ ಸ್ನೇಹಿತನನ್ನು ದೆಹಲಿ ಪೊಲೀಸರು ಇಂದು ಬಂಧಿಸಿದ್ದಾರೆ.
ಆರೋಪಿಗಳು ದೆಹಲಿ ವಿಶ್ವವಿದ್ಯಾನಿಲಯ ಕ್ಯಾಂಪಸ್ ಸುತ್ತ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳು 25 ವರ್ಷದ ಶುಭಂ ಮಲ್ಹೋತ್ರಾ ಮತ್ತು ಆತನ ಸ್ನೇಹಿತ 27 ವರ್ಷದ ಕೀರ್ತಿ ಎಂದು ತಿಳಿದುಬಂದಿದ್ದು ಹಿಮಾಚಲ ಪ್ರದೇಶದಿಂದ ಡ್ರಗ್ಸ್ ತಂದು ದೆಹಲಿಯಲ್ಲಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಕೆಲವರು ದೆಹಲಿ ವಿಶ್ವವಿದ್ಯಾನಿಲಯಕ್ಕೆ ಡ್ರಗ್ಸ್ ಸರಬರಾಜು ಮಾಡುತ್ತಾರೆ ಎಂಬ ಮಾಹಿತಿ ಪಡೆದ ನಂತರ ದೆಹಲಿ ಪೊಲೀಸರು ತನಿಖೆ ಆರಂಭಿಸಿದರು ಎಂದು ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ ರೋಹಿತ್ ಮೀನಾ ಹೇಳಿದ್ದಾರೆ.
ಶುಭಂ ಮತ್ತು ಆತನ ಸ್ನೇಹಿತ ಕೀರ್ತಿ ಹಿಮಾಚಲದಿಂದ ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.




