ತೋಡಿನಂತಾದ ಕಲ್ಲಡ್ಕ ಹೆದ್ದಾರಿ:
ಹೆದ್ದಾರಿಯುದ್ದಕ್ಕೂ ರಸ್ತೆಯನ್ನು ಹುಡುಕಿಕೊಂಡು ಸಂಚಾರ: ಭಾರೀ ಜನಾಕ್ರೋಶ
ಬಂಟ್ವಾಳ: ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕಲ್ಲಡ್ಕದಲ್ಲಿ ಅವ್ಯವಸ್ಥೆ ಉಂಟಾಗಿದೆ. ಕಳೆದ ಕೆಲವು ತಿಂಗಳ ಹಿಂದೆ ಹೆದ್ದಾರಿ ಕಾಮಗಾರಿ ಆರಂಭಿಸಲಾಗಿದ್ದು, ಕಲ್ಲಡ್ಕದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸದ ಹಿನ್ನೆಲೆಯಲ್ಲಿ ವಾಹನ ಸವಾರರು ಸದ್ಯ ನರಕ ಯಾತನೆ ಅನುಭವಿಸುವಂತಾಗಿದೆ.
ಹೆದ್ದಾರಿಯುದ್ದಕ್ಕೂ ರಸ್ತೆಯನ್ನು ಹುಡುಕಿಕೊಂಡು ಸಂಚಾರ ನಡೆಸಬೇಕಾದ ದುಸ್ಥಿತಿ ಸವಾರರಿಗೆ ಎದುರಾಗಿದೆ. ಅರೆಬರೆ ಕಾಮಗಾರಿಯಿಂದಾಗಿ ಹೊಂಡಗುಂಡಿಗಳು, ಅವುಗಳಲ್ಲಿ ಮಳೆ ನೀರು ನಿಂತು ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ.
ರಾಷ್ಟ್ರೀಯ ಹೆದ್ದಾರಿ ಮಂಗಳೂರು – ಬೆಂಗಳೂರು ಮಧ್ಯೆ ಕಲ್ಲಡ್ಕದ ರಸ್ತೆಯಲ್ಲಿ ಸಂಚರಿಸಲು ಭಯವಾಗುತ್ತದೆ. ಕಲ್ಲಡ್ಕದಲ್ಲಿ ಚತುಷ್ಪಥ ಹೆದ್ದಾರಿ ಪ್ಲೈ ಓವರ್ ಕಾಮಗಾರಿ ನಡೆಯುತ್ತಿದ್ದು, ಹಳೆಯ ರಸ್ತೆಯನ್ನು ಸಂಪೂರ್ಣ ಸ್ಥಗಿತಗೊಳಿಸಿ ಪ್ರತ್ಯೇಕ ಡಾಮರು ರಸ್ತೆ ನಿರ್ಮಾಣ ಮಾಡಿ ಆ ಮೂಲಕ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಬದಲಿ ರಸ್ತೆ ವಾರದ ಹಿಂದೆಯೇ ಮಳೆಗೆ ಹಾನಿಗೊಳಗಾಗಿದ್ದು, ರಸ್ತೆಯೇ ಮಾಯವಾಗಿದೆ. ಎಲ್ಲೆಂದರಲ್ಲಿ ನೀರು ನಿಂತು, ಕಲ್ಲಡ್ಕ ಪೇಟೆ ಸಣ್ಣ ತೋಡಿನಂತಾಗಿದೆ.
ಕಾಮಗಾರಿ ವಹಿಸಿಕೊಂಡ ಕಂಪೆನಿ ಸಮರ್ಪಕ ರಸ್ತೆ ನಿರ್ಮಾಣ ಮಾಡದ ಹಿನ್ನೆಲೆಯಲ್ಲಿ ಅವ್ಯವಸ್ಥೆ ಉಂಟಾಗಿದೆ. ಹೆದ್ದಾರಿಯುದ್ದಕ್ಕೂ ಸವಾರರು ಪರದಾಡುತ್ತಿದ್ದು, ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಕ್ಷಣ ಸಂಬಂಧಿಸಿದವರು ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ.





