March 26, 2026

ಸುಳ್ಯ: ಬಾಯ್ತೆರೆದು ನಿಂತಿದೆ ತೂಗು ಸೇತುವೆಯ ತಡೆಬೇಲಿಗಳು: ನಡೆದಾಡುವಾಗ ಆಯ ತಪ್ಪಿದರೆ ಕಾದಿದೆ ಅನಾಹುತ

0
IMG-20220705-WA0032.jpg

ವರದಿ: ಹಸೈನಾರ್ ಜಯನಗರ
ಸುಳ್ಯ: ತೂಗು ಸೇತುವೆಯ ತವರೂರು ನಮ್ಮ ಸುಳ್ಯ ನಾಡು. ತೂಗು ಸೇತುವೆಯ ಸರದಾರ ಪದ್ಮಶ್ರೀ ಭಾರದ್ವಾಜ್ ರವರ ಅಚ್ಚುಮೆಚ್ಚಿನ ನಾಡು. ಅವರ ಕೃಪೆಯಿಂದ, ಪರಿಶ್ರಮದಿಂದ ಸುಳ್ಯದ ಹೆಸರನ್ನು ದೇಶದಾದ್ಯಂತ ಮತ್ತು ಪ್ರಪಂಚದಾದ್ಯಂತ ಕೀರ್ತಿಯನ್ನು ಬೆಳೆಸಿದ ಸುಳ್ಯ ನಾಡು.
ನೂರಾರು ಗ್ರಾಮಗಳ ಸಾವಿರಾರು ಮಂದಿ ಗ್ರಾಮಸ್ಥರು ನದಿಗಳನ್ನು ದಾಟಿ ತಮ್ಮೂರಿಗೆ ನಡೆದಾಡಲು ಸೇತುವೆಗಳಿಲ್ಲದೆ ಸಂಕಷ್ಟಪಡುವ ಸಂದರ್ಭದಲ್ಲಿ ಬ್ರಿಡ್ಜ್ ಮ್ಯಾನ್ ಎಂದೇ ಹೆಸರುವಾಸಿಯಾದ ಸುಳ್ಯದ ಮಣ್ಣಿನ ಮಗ ತಮ್ಮ ಅದ್ಭುತ ಸಾಧನೆಗಳ ಮೂಲಕ ನೂರಾರು ತೂಗು ಸೇತುವೆಗಳನ್ನು ನಿರ್ಮಿಸಿ ಗ್ರಾಮಸ್ಥರಿಗೆ ಆಸರೆಯಾಗಿ ಬೆಳೆದವರು.

ಇದೀಗ ಅವರು ನಿರ್ಮಿಸಿದ ಸುಳ್ಯ ನಗರದ ವ್ಯಾಪ್ತಿಗೆ ಬರುವ ಓಡಬಾಯಿ ಭಾಗದಲ್ಲಿ ದೊಡ್ಡೇರಿಗೆ ಸಂಪರ್ಕ ಕಲ್ಪಿಸುವ ತೂಗು ಸೇತುವೆ ಇಲ್ಲಿ ನಡೆದಾಡುವ ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳಿಗೆ ಆತಂಕ ತಂದೊಡ್ಡುವ ಪರಿಸ್ಥಿತಿಯಲ್ಲಿ ಇದೆ.
ಈ ಸೇತುವೆಯ ಮೂಲಕ ದಿನಬೆಳಗಾದರೆ ರಾತ್ರಿ ಸಮಯದವರೆಗೆ ಹೆಚ್ಚಾಗಿ ದಲಿತ ಸಮುದಾಯದ ನೂರಾರು ಮಂದಿ ಜನರು ಈ ರಸ್ತೆಯನ್ನು ತಮ್ಮ ಜೀವನಕ್ಕಾಗಿ ಅವಲಂಬಿಸಿಕೊಂಡಿದ್ದಾರೆ. ದೊಡ್ಡೇರಿ , ಮುಳ್ಯ, ಮುಳ್ಯ ಅಂಗಡಿಮಠ, ಕಾಂತಮಂಗಲ ಹೀಗೆ ನಾನಾ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆ ನೂರಾರು ಮಂದಿ ಗ್ರಾಮಸ್ಥರಿಗೆ,ವಿದ್ಯಾರ್ಥಿಗಳಿಗೆ, ಕೂಲಿ ಕಾರ್ಮಿಕರಿಗೆ ವರದಾನವಾಗಿದೆ.

ಆದರೆ ಇದೀಗ ಈ ತೂಗು ಸೇತುವೆಯ ಮುಖ್ಯ ರಸ್ತೆಯ ಭಾಗದ ದ್ವಾರದಿಂದ ಸುಮಾರು ಐವತ್ತು ಅಡಿಗಳಷ್ಟು ದೂರ ತಡೆ ಬೇಲಿ ಸಂಪೂರ್ಣವಾಗಿ ಮುರಿದು ಹೋಗಿದ್ದು ಇದರಲ್ಲಿ ಚಲಿಸುವವರು ಸಣ್ಣ ಮಟ್ಟಿಗೆ ಆಯ ತಪ್ಪಿದರೆ 20 ಅಡಿ ಆಳದ ಗುಂಡಿಗೆ ಬೀಳುವ ಅಪಾಯದ ಸ್ಥಿತಿ ನಿರ್ಮಾಣವಾಗಿದೆ. ಸೇತುವೆಯ ಮೇಲ್ಭಾಗದಲ್ಲಿಯೂ ಕೂಡ ತಡೆ ಬೇಲಿಯ ಜಾಲಿಗಳು ಅಲ್ಲಲ್ಲಿ ತುಕ್ಕು ಹಿಡಿದು ಶಿಥಿಲಾವಸ್ಥೆ ಗೊಂಡಿದ್ದು ಅಪಾಯದ ಮುನ್ಸೂಚನೆಯನ್ನು ನೀಡುತ್ತಿದೆ. ಇದೀಗ ಮಳೆಗಾಲ ಆದ ಹಿನ್ನೆಲೆಯಲ್ಲಿ ನದಿಯಲ್ಲಿ ನೀರಿನ ಪ್ರಮಾಣವು ಹೆಚ್ಚಾಗಿದ್ದು ದಡದವರೆಗೆ ನದಿ ನೀರು ಆವರಿಸಿಕೊಂಡಿದೆ.

ಈ ರೀತಿಯ ವ್ಯವಸ್ಥೆಗಳನ್ನು, ಸೌಲಭ್ಯಗಳನ್ನು ಒದಗಿಸಿಕೊಟ್ಟವರನ್ನು ಗೌರವಿಸುವಾಗ ಅವರು ನಮಗಾಗಿ ನೀಡಿದ ಸೌಲಭ್ಯಗಳ ನ್ನು ಕೊಡುಗೆಗಳನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇದಕ್ಕೆ ಸಂಬಂಧಪಟ್ಟ ಇಲಾಖೆಯವರು, ಅಧಿಕಾರಿಗಳು ಮಳೆಗಾಲಕ್ಕೂ ಮುನ್ನ ಈ ರೀತಿ ದುರವಸ್ತೆಗೊಂಡಿರುವ ಸೇತುವೆಗಳನ್ನು, ತೂಗು ಸೇತುವೆಗಳನ್ನು, ರಸ್ತೆ, ಸರ್ಕಾರಿ ಕಟ್ಟಡಗಳನ್ನು, ಶಾಲಾ ಕಟ್ಟಡಗಳನ್ನು ಪರಿಶೀಲನೆ ನಡೆಸಿ ಪೂರ್ವಭಾವಿ ಸಿದ್ಧತೆಯೊಂದಿಗೆ ಜನತೆಯ ರಕ್ಷಣೆಗೆ ಬೇಕಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ಜವಾಬ್ದಾರಿ ಆಗಿರುತ್ತದೆ.

ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ ಎಂಬಂತೆ ಪ್ರಾಣಪಾಯ ಸಂಭವಿಸಿದ ಮೇಲೆ ಪರಿಹಾರ ಘೋಷಿಸುವ ಬದಲು ಪ್ರಾಣದ ರಕ್ಷಣೆ ಮಾಡಲು ಮೊದಲು ಮುಂದಾಗ ಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ಮುಂದೆ ಉಂಟಾಗಬಲ್ಲ ಅನಾಹುತವನ್ನು ತಪ್ಪಿಸಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!