March 26, 2026

ಮನೆಯ ಮೆಟ್ಟಿಲುಗಳಿಂದ ಎಡವಿ ಬಿದ್ದ ಲಾಲು ಪ್ರಸಾದ್ ಯಾದವ್: ಭುಜ ಮುರಿತ, ಬೆನ್ನಿಗೆ ಗಾಯ

0
image_editor_output_image-1041414672-1656912377164.jpg

ಪಟ್ನಾ: ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್‌ ಭಾನುವಾರ ಮನೆಯ ಮೆಟ್ಟಿಲುಗಳ ಮೇಲೆ ಬಿದ್ದಿದ್ದು, ಅವರ ಭುಜದಲ್ಲಿ ಮುರಿತ ಉಂಟಾಗಿದ್ದು, ಬೆನ್ನಿಗೂ ಗಾಯಗಳಾಗಿವೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ವಯೋಸಹಜ, ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಲಾಲು ಪ್ರಸಾದ್‌ ಅವರು ಕಿಡ್ನಿ ಸಮಸ್ಯೆಯ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು. ಈ ಮಧ್ಯೆ ಅವಘಡ ಸಂಭವಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

‘ಅವರ ಭುಜದಲ್ಲಿ ಮುರಿತವಾಗಿರುವುದು ಪರೀಕ್ಷೆಗಳಿಂದ ಗೊತ್ತಾಗಿದೆ. ಭುಜ ಹೊಂದಿಕೊಳ್ಳಲೆಂದು ಅವರಿಗೆ ಕಟ್ಟು ಹಾಕಲಾಗಿದೆ. ಕೆಲ ಔಷಧಿಗಳನ್ನು ನೀಡಿ ಮರಳಿ ಮನೆಗೆ ಕಳುಹಿಸಲಾಗಿದೆ’ ಎಂದು ಅವರ ಆಪ್ತ ಸಹಾಯಕ ಹೇಳಿದರು.

ಭುಜದ ಮುರಿತ ಮತ್ತು ಬೆನ್ನಿನ ಗಾಯದ ಹೊರತಾಗಿ ಅವರಿಗೆ ಇನ್ಯಾವುದೇ ಸಮಸ್ಯೆಯಾಗಿಲ್ಲ ಎಂದೂ ಮಾಹಿತಿ ಲಭ್ಯವಾಗಿದೆ.

ಮೇವು ಹಗರಣದ ಹಲವು ಪ್ರಕರಣಗಳಲ್ಲಿ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಅವರು ಕೆಲವು ತಿಂಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!